ಜಾಟ್ ಮೀಸಲಾತಿ ಹಿಂಸಾಚಾರ ಪ್ರಕರಣ: ನಾಲ್ವರು ಪ್ರತಿಭಟನಾಕಾರರಿಗೆ ಐದು ವರ್ಷ ಜೈಲುಶಿಕ್ಷೆ

ಚಂಡೀಗಢ, ಸೆ.29: ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರ ಘಟನೆಯಲ್ಲಿ ಅಪರಾಧಿಗಳೆಂದು ಘೋಷಿಸಲಾಗಿರುವ ನಾಲ್ವರಿಗೆ ಸ್ಥಳೀಯ ನ್ಯಾಯಾಲಯ ಐದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಹಿಸಾರ್ ಜಿಲ್ಲೆಯ ಸಿಸಾಯ್ ಗ್ರಾಮದ ದಲ್ಜೀತ್, ವಿನೋದ್, ರಾಜು ಮತ್ತು ಸೂರಜ್ ಮೇಲೆ ಐಪಿಸಿ ಸೆಕ್ಷನ್‌ನಡಿ ಹೊರಿಸಲಾಗಿದ್ದ ಆರೋಪ ಸಾಬೀತಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನಾಯಾಧೀಶರು ತಿಳಿಸಿದ್ದಾರೆ. ಜೈಲುಶಿಕ್ಷೆಯ ಜೊತೆಗೆ ಪ್ರತಿಯೊಬ್ಬರಿಗೂ ತಲಾ 65,000 ರೂ. ದಂಡ ವಿಧಿಸಲಾಗಿದೆ.
ಜಾಟ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ 2016ರಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಸುಮಾರು 300ರಷ್ಟು ಜನರಿರುವ ಗುಂಪೊಂದು ದೊಣ್ಣೆ ಹಾಗೂ ಮಾರಕಾಯುಧ ಸಹಿತ ಸಿಸಾಯ್ ಗ್ರಾಮದಿಂದ ಸೈನಿಪುರ ಗ್ರಾಮದತ್ತ ಮುಂದುವರಿಯುತ್ತಿದ್ದು, ರಸ್ತೆ ಪಕ್ಕದ ಮರಗಳನ್ನು ಕಡಿದು ರಸ್ತೆ ಮೇಲೆ ಉರುಳಿಸಿ ರಸ್ತೆ ತಡೆ ಮಾಡುತ್ತಿದ್ದಾರೆ. ಅಲ್ಲದೆ ದಾರಿಯಲ್ಲಿ ಕೆಲವು ಮನೆಗಳನ್ನೂ ಧ್ವಂಸಗೊಳಿಸಲಾಗಿದೆ ಎಂದು ಮಾಹಿತಿ ಬಂದಿತ್ತು ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ 30 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ 200ರಿಂದ 300ರಷ್ಟು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆಗ ಗುಂಪಿನಲ್ಲಿದ್ದವರಲ್ಲಿ ನಾಲ್ವರ ಗುರುತು ಪತ್ತೆಹಚ್ಚಲು ಸಾಧ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.







