ಭಯೋತ್ಪಾದನೆಯಲ್ಲಿ ಮಾತ್ರವಲ್ಲ, ಹುಸಿ ಮಾತಿನಲ್ಲೂ ಪಾಕ್ ಪರಿಣತಿ ಹೊಂದಿದೆ: ಸುಶ್ಮಾ ವಾಗ್ದಾಳಿ

ವಿಶ್ವಸಂಸ್ಥೆ, ಸೆ. 29: ಪಾಕಿಸ್ತಾನದ ಪರಿಣತಿ ಭಯೋತ್ಪಾದನೆಗೆ ಆಶ್ರಯ ನೀಡುವುದಷ್ಟಕ್ಕೇ ಸೀಮಿತವಾಗಿಲ್ಲ, ಹುಸಿ ಮಾತುಗಾರಿಕೆಯ ಮೂಲಕ ದುಷ್ಕೃತ್ಯವನ್ನು ಮರೆಮಾಚುವುದರಲ್ಲೂ ಅದು ಪರಿಣತಿ ಹೊಂದಿದೆ ಎಂದು ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನದೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದ ಮಾತುಕತೆಯನ್ನು ಬುಡಮೇಲುಗೊಳಿಸಿದ್ದು ಭಾರತ ಎಂಬ ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿದರು. ಉಭಯ ದೇಶಗಳ ನಡುವಿನ ಮಾತುಕತೆ ಸ್ಥಗಿತಗೊಳ್ಳಲು ಪಾಕಿಸ್ತಾನವೇ ಕಾರಣ ಎಂಬುದನ್ನು ಪುನರುಚ್ಚರಿಸಿದರು.
‘‘ಮಾತುಕತೆಯ ಪ್ರಕ್ರಿಯೆಯ ಹಳಿ ತಪ್ಪಿಸುತ್ತಿದ್ದೇವೆ ಎಂಬ ಆರೋಪವನ್ನು ನಮ್ಮ ವಿರುದ್ಧ ಮಾಡಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ಅತ್ಯಂತ ಸಂಕೀರ್ಣ ವಿವಾದಗಳನ್ನು ಇತ್ಯರ್ಥಪಡಿಸಲು ಮಾತುಕತೆಗಳೇ ಅತ್ಯಂತ ವೈಚಾರಿಕ ವಿಧಾನಗಳು ಎಂಬುದಾಗಿ ನಾವು ಭಾವಿಸಿದ್ದೇವೆ. ಪಾಕಿಸ್ತಾನದೊಂದಿಗೆ ಮಾತುಕತೆ ಹಲವು ಬಾರಿ ಆರಂಭವಾಗಿದೆ. ಅದು ನಿಂತಿದ್ದರೆ ಅದಕ್ಕೆ ಕಾರಣ ಪಾಕಿಸ್ತಾನದ ವರ್ತನೆ’’ ಎಂದು ಸುಶ್ಮಾ ಹೇಳಿದರು.
ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಸುಶ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಮಾತುಕತೆ ನಡೆಸುವ ಬಗ್ಗೆ ಪ್ರಸ್ತಾಪವಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪೊಲೀಸರ ಹತ್ಯೆಯ ಬಳಿಕ ಭಾರತ ಈ ಮಾತುಕತೆಯನ್ನು ರದ್ದುಪಡಿಸಿದೆ.







