ಯುವತಿಗೆ ವಂಚನೆ ಆರೋಪ : ಯುವಕನ ಮನೆ ಎದುರು ಧರಣಿ

ಮಂಡ್ಯ, ಸೆ.29: ಯುವಕನೊಬ್ಬ ಬೇರೆ ಹುಡುಗಿ ಜತೆ ವಿವಾಹವಾಗಲು ಪ್ರೀತಿಸಿ ಜಾತಿಯ ನೆಪವೊಡ್ಡಿ ತನ್ನನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಯುವತಿ ಯುವಕನ ಮನೆ ಎದುರು ಮಹಿಳಾ ಸಂಘಟನೆಯೊಂದಿಗೆ ನ್ಯಾಯಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಮದ್ದೂರು ತಾಲೂಕು ದೊಡ್ಡಅರಸಿನಕೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕಮರೀಗೌಡನದೊಡ್ಡಿ ಗ್ರಾಮದ ಬೋರಲಿಂಗಯ್ಯ ಎಂಬುವರ ಮನೆ ಎದುರು ಮಹೇಶ್ವರಿ ಎಂಬುವರು ಧರಣಿ ನಡೆಸುತ್ತಿದ್ದಾರೆ.
ಬೋರಲಿಂಗಯ್ಯ ಅವರ ಮಗ ನಂದೀಶ ತನ್ನನ್ನು ಪ್ರೀತಿಸಿ ಎರಡು ವರ್ಷದ ಹಿಂದೆ ಮದುವೆಯಾಗಿ, ಈಗ ಜಾತಿ ಕಾರಣಕ್ಕೆ ಬೇರೆ ಮದುವೆ ಆಗುತ್ತೇನೆ ಮನೆ ಬಿಟ್ಟು ಹೋಗು ಎಂದು ಹಿಂಸೆ ನೀಡಿದ್ದಾರೆ ಎಂದು ಮಹೇಶ್ವರಿ ಆರೋಪಿಸಿದ್ದಾರೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಮಾತುಕತೆ ನಡೆಸಿ ಮನೆಗೆ ಕಳುಹಿಸಿದ್ದಾರೆ ಆದರೆ ಮಧ್ಯರಾತ್ರಿ ಯುವತಿಯನ್ನು ನಂದೀಶ್ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಮಹೇಶ್ವರಿ ಅವರ ಧರಣಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ ನೇತೃತ್ವದಲ್ಲಿ ಸಂಘಟನೆ ಸದಸ್ಯರು ಬೆಂಬಲ ನೀಡಿದ್ದಾರೆ.





