ಬಿಎಂಶ್ರೀ ಹೊಸ ಲೇಖಕರ ಪರಂಪರೆ ಸೃಷ್ಟಿಸಿದ್ದರು: ಎಸ್.ದಿವಾಕರ್
ಬೆಂಗಳೂರು, ಸೆ.29: ಸಾಹಿತಿ ಬಿಎಂಶ್ರೀ ಅವರು ಹೊಸ ಕನ್ನಡದ ಲೇಖಕರ ಪರಂಪರೆಯನ್ನು ಸೃಷ್ಟಿಸಿದ್ದಾರೆ ಎಂದು ಸಣ್ಣ ಕಥೆಗಾರ ಎಸ್.ದಿವಾಕರ್ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಆಯೋಜಿಸಿದ್ದ ತಿಂಗಳ ಕಾರ್ಯಕ್ರಮದ ಅಂಗವಾಗಿ ‘ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು’ ಕುರಿತ ಉಪನ್ಯಾಸ ನೀಡಿ ಮಾತನಾಡಿದ ಅವರು, ಆಧುನಿಕ ಸಾಹಿತ್ಯಕ ಕನ್ನಡ ಭಾಷೆಯನ್ನು ನವ್ಯ ಭಾಷೆಗೆ ಒಗ್ಗಿಸುವ ಕೆಲಸ ಬಿಎಂಶ್ರೀ ಮಾಡಿದ್ದರು. ಆ ಮೂಲಕ ಕನ್ನಡದ ಸಾಹಿತ್ಯ ಭಾಷೆಗೆ ಹೊಸ ರೂಪ ನೀಡಿದ್ದರು ಎಂದು ಹೇಳಿದರು.
ನವೋದಯ ಕಾಲದಲ್ಲಿ ಬಿಎಂಶ್ರೀ ಅವರು ಅಪಾರವಾದ ಪ್ರಭಾವ ಬೀರಿದ್ದಾರೆ. ಮೊಟ್ಟ ಮೊದಲಿಗೆ ಕನ್ನಡದಲ್ಲಿ ಪ್ರೇಮ ಗೀತೆಗಳನ್ನು ಬರೆಯಲು ಇವರ ಅನುವಾದವೂ ಪರಿಣಾಮ ಬೀರಿದೆ. ಆದರೆ, ಇಂಗ್ಲಿಷ್‌ನಲ್ಲಿನ ಬ್ರೆಕ್ಟ್, ಸಾನೆಟ್ ಸೇರಿದಂತೆ ಪ್ರಮುಖ ಕವಿಗಳ ಕವಿತೆಗಳನ್ನು ಬಿಎಂಶ್ರೀ ಅನುವಾದ ಮಾಡಿರಲಿಲ್ಲ. ಅನುವಾದ ಮಾಡಲು ಯಾವುದು ಸಾಧ್ಯವೋ ಅದನ್ನಷ್ಟೇ ಮಾಡುತ್ತೇನೆ ಎಂಬುದು ಅವರ ವಾದವಾಗಿತ್ತು ಎಂದು ತಿಳಿಸಿದರು.
ದೇಶದಲ್ಲಿ ಇತ್ತೀಚಿಗೆ ಅನುವಾದ ಮಾಡಲು ಹಲವಾರು ವಿಧಾನಗಳಿವೆ. ಆದರೆ, ಬಿಎಂಶ್ರೀ ಅವರ ಅನುವಾದದಲ್ಲಿ ಹೆಚ್ಚು ಸ್ವಾತಂತ್ರವನ್ನು ಬಳಸಿಕೊಂಡಿದ್ದರು. ಕವಿತೆಯ ಶೇ.70 ರಷ್ಟು ಮೂಲವನ್ನು ಅನುಸರಿಸುತ್ತಿರಲಿಲ್ಲ. ಕನ್ನಡಕ್ಕೆ ಹತ್ತಿರವಾದ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಅನುವಾದ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಅವರ ಪ್ರಭಾವ ಆಧುನಿಕ ಕವಿಗಳ ಮೇಲೆ ಅಪಾರವಾದ ಪರಿಣಾಮ ಬೀರಿತ್ತು. ಬಿಎಂಶ್ರೀ ಅವರ ಅನುವಾದ ಕವಿತೆಗಳು ಹೆಚ್ಚು ಪ್ರಚಾರ ಪಡೆದುಕೊಂಡಿದ್ದವು. ಅನುವಾದದ ಕವಿತೆಗಳು ಸ್ವ ರಚನೆ ಕವಿತೆಯಂತೆ ಇರುತ್ತಿದ್ದವು ಎಂದು ಬಣ್ಣಿಸಿದರು.
ಭಾವಗೀತೆಗಳಿಗೆ ಸ್ಥಿರವಾದ ಕ್ರಿಯೆಯನ್ನು ರಕ್ಷಿಸಿಕೊಟ್ಟಿದ್ದು ಬಿಎಂಶ್ರೀ. ಓದುಗರಿಗೆ ಪರಿಚಯವಿಲ್ಲದ ಭಾಷೆಯನ್ನು ಸೊಗಸಾಗಿ, ಸರಳವಾದ, ಅಚ್ಚ ಕನ್ನಡದ ಹಾಗೂ ಗ್ರಾಮ್ಯ ಭಾಷೆಯನ್ನು ಬಳಸಿ ಅನುವಾದದ ಕವಿತೆಗಳನ್ನು ವಿಸ್ತರಿಸಿದ್ದಾರೆ. ಇಂದಿನ ಕವಿಗಳಿಗೆ ಬಿಎಂಶ್ರೀ ಸ್ಪೂರ್ತಿಯಾಗಬೇಕಿದೆ ಎಂದು ಅವರು ಹೇಳಿದರು.
ಕವನ ಎಂದಿಗೂ ನೆನಪಿನಲ್ಲಿರಬೇಕು. ಕವಿತೆಯಲ್ಲಿ ಲಯವಿರಬೇಕು. ಇಲ್ಲದಿದ್ದರೆ ಅದು ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಿಎಂಶ್ರೀ ಅವರ ಅನುವಾದ ಸದಾ ನೆನಪಿನಲ್ಲಿರುವಂತೆ ಮಾಡುತ್ತದೆ. ಆದರೆ, ಇತ್ತೀಚಿಗೆ ಅನುವಾದ ಮಾಡುವ ಸಂದರ್ಭದಲ್ಲಿ ಮೂಲದಲ್ಲಿರುವ ಲಯ, ಪ್ರಾಸವನ್ನು ಬಿಟ್ಟು ಅನುವಾದ ಮಾಡಲು ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕವನ ಅನುವಾದ ಮಾಡುವಾಗ ಮೂಲ ಕವನ ಸಮಕಾಲೀನತೆಗೆ ತಕ್ಕಂತೆ ಅರಳಬೇಕು. ಅದಕ್ಕಾಗಿ, ಅನುವಾದ ಮಾಡುವಾಗ ಅನುವಾದಕ ಕವಿಯಾಗಿರಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿಮರ್ಶಕ ಎಚ್.ದಂಡಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ ಉಪಸ್ಥಿತರಿದ್ದರು.







