ಕುಂ.ವೀರಭದ್ರಪ್ಪಗೆ ಜ್ಞಾನಪೀಠ ನೀಡಬೇಕು: ಡಾ.ಮನು ಬಳಿಗಾರ್
‘ಕಿಲುಬು’ ಕಾದಂಬರಿ ಬಿಡುಗಡೆ

ಬೆಂಗಳೂರು, ಸೆ.29: ಸಾಮಾಜಿಕ ನ್ಯಾಯದ ಬಗ್ಗೆ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಕೃತಿಗಳನ್ನು ರಚನೆ ಮಾಡುವುದರಿಂದ ಇವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲು ಸಾಹಿತ್ಯ ವಲಯ ಮತ್ತು ಸರಕಾರ ಶಿಫಾರಸ್ಸು ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.
ಶನಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಸಪ್ನ ಬುಕ್‌ಹೌಸ್ ಹೊರ ತಂದಿರುವ ಸಾಹಿತಿ ಕುಂ.ವೀರಭದ್ರಪ್ಪ ಬರೆದ ‘ಕಿಲುಬು’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡದ ಕೆಲವೇ ಕಾದಂಬರಿಗಾರರಲ್ಲಿ ಕುಂ.ವೀ ಅವರು ಒಬ್ಬರಾಗಿದ್ದು, ಇವರು ಬರೆದಿರುವ ಪುಸ್ತಕಗಳಿಗೆ ಈಗಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಸಾಮಾಜಿಕ ನ್ಯಾಯದ ಗುರಿಯಾಗಿಸಿಕೊಂಡು ಬರೆಯುವ ಕುಂ.ವೀಗೆ ಜ್ಞಾನಪೀಠ ಪ್ರಶಸ್ತಿ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ಶಿಫಾರಸ್ಸು ಚಟುವಟಿಕೆ ಜರುಗಲಿದೆ ಎಂದು ನುಡಿದರು.
ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಸಮಾಜದ ವಿವಿಧ ಸ್ತರದಲ್ಲಿ ಸೇರಿಕೊಂಡಿರುವ ಕಿಲುಬನ್ನು ಕುಂ.ವೀ ಅವರು ತಮ್ಮ ಕಾದಂಬರಿಯಾದ ಈ ಕಿಲುಬುನಲ್ಲಿ ತಿಳಿಸಿದ್ದಾರೆ. ಇದು ಇವರ 20ನೇ ಕಾದಂಬರಿಯಾಗಿದ್ದು, ಕನ್ನಡದಲ್ಲಿ ಎಸ್.ಎಲ್.ಭೈರಪ್ಪನಂತರ ಹೆಚ್ಚು ಆಕರ್ಷಕವಾಗಿ ಬರೆಯುವ ಕಾದಂಬರಿಕಾರರು ಎಂದರೆ ಅದು ಕುಂ.ವೀ. ಆಗಿದ್ದಾರೆ ಎಂದು ಬಣ್ಣಿಸಿದರು.
ಮುಖ್ಯಮಂತ್ರಿಯಾಗಲು ರಾಜಕೀಯ ಮುಖಂಡರೊಬ್ಬರು ನಡೆಸುವ ರಾಜಕೀಯ ತಂತ್ರಗಾರಿಕೆ ಈ ಕಾದಂಬರಿಯ ಕಥಾ ಹಂದರವಾಗಿದೆ. ಅನಿರೀಕ್ಷಿತವಾಗಿ ಕಾದಂಬರಿ ಮುಕ್ತಾಯಗೊಳ್ಳುತ್ತದೆ. ಆದರೆ, ಈ ರಾಜಕೀಯ ಪರಿಸ್ಥಿತಿ ಒಂದು ರೀತಿಯ ವಿಷ ಚಕ್ರ ಇದ್ದಂತೆ. ಹೀಗಾಗಿ ಎಲ್ಲಿಗೆ ಮುಗಿಸಿದರೂ ಅಷ್ಟೇ ಅರ್ಥ ಇರುತ್ತದೆ ಎಂದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ರಾಜಕೀಯ ವ್ಯವಸ್ಥೆ ಹಾಳಾಗಿದೆ. ರಾಜಕೀಯ ಮುಖಂಡರು ಆತ್ಮಸಾಕ್ಷಿ, ಸಾಹಿತ್ಯದ ಜ್ಞಾನವಿಲ್ಲದೆ ಮಾತನಾಡುತ್ತಾರೆ. ರಾಜಕಾರಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಇಬ್ಬರೂ ಅನ್ಯೋನ್ಯವಾಗಿದ್ದರೆ ಸಮಾಜ ಉತ್ತಮವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಮುಂಖಡರು ದೇವರಿಗೆ ಕೈ ಮುಗಿಯುವ ಬದಲು ಮತದಾರರ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಬೇಕು ಎಂದ ಅವರು, ಲೇಖಕನಿಗೆ ಪ್ರಶ್ನಿಸುವ ಹಕ್ಕಿರಬೇಕು. ಕೆಲವು ರಾಜಕಾರಣಿಗಳು ಗೌರಿ ಹತ್ಯೆ ಆರೋಪಿಗಳ ಪರವಾಗಿ ಮಾತನಾಡುವ ಮೂಲಕ ಸಂವಿಧಾನಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಕಾದಂಬರಿ ಕಿಲುಬುನಲ್ಲಿ ರಾಜಕೀಯ ವಿಡಂಬಣೆ ಇದೆ. ಬಹುಶಃ ಕಾರಂತರ ನಂತರ ಯಾವ ಲೇಖಕರು ಸಹ ಈ ರಾಜಕೀಯ ವಿಡಂಬಣೆ ಕುರಿತು ಬರೆಯಲಿಲ್ಲ. ಬರೆಯುವುದು ನನ್ನ ದೇಹಕ್ಕೆ ಒಂದು ರೀತಿಯಲ್ಲಿ ವ್ಯಾಯಾಮ ಇದ್ದಂತೆ ಎಂದು ಕುಂ.ವೀ ನುಡಿದರು. ಕಾರ್ಯಕ್ರಮದಲ್ಲಿ ಸಪ್ನಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ಸೇರಿ ಪ್ರಮುಖರಿದ್ದರು.
ಪ್ರಶಸ್ತಿಗೆ ಲಾಬಿ ಮಾಡಲ್ಲ
ನಾನು ಯಾವುದೇ ಅಕಾಡೆಮಿ ಅಧ್ಯಕ್ಷ ಸ್ಥಾನ ಮತ್ತು ಸರಕಾರ ನೀಡುವ ಸೈಟಿಗಾಗಿ ಕಾಯ್ದು ಕುಳಿತಿಲ್ಲ. ನಮ್ಮೂರಲ್ಲಿ ನನಗೆ ದೇವರು ಕೊಟ್ಟ ಆರು-ಮೂರು ಅಡಿ ಕೊಟ್ಟ ಜಾಗವಿದೆ. ಜ್ಞಾನಪೀಠ ಪ್ರಶಸ್ತಿಗೆ ನಾನು ಲಾಬಿ ಮಾಡುವುದಿಲ್ಲ. ಸಹಜವಾಗಿ ಬಂದರೆ ಸ್ವೀಕರಿಸುತ್ತೇನೆ.
-ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ
ವಿಧಾನಸೌಧ ‘ಬಿಗ್‌ಬಜಾರ್’ ಇದ್ದಂತೆ...!
ಜನರ ಅಭಿವೃದ್ಧಿಗೆ ಇರುವ ವಿಧಾನಸೌಧ ‘ಬಿಗ್‌ಬಜಾರ್’ ಮಾದರಿಯಲ್ಲಿ ಮಾರಾಟ ಕೇಂದ್ರವಾಗಿದೆ. ಅಲ್ಲದೆ, ಶಾಸಕರನ್ನು ಕೋಟ್ಯಂತರ ರೂಪಾಯಿ ನೀಡಿ ಖರೀದಿಸುವುದು ವಿಪರ್ಯಾಸದ ಸಂಗತಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ನುಡಿದರು.







