ಐಐಎಂಎಸ್‌ನಂತಹ ಸಂಸ್ಥೆಗಳಿಗೆ ಸ್ವಾಯತ್ತತೆ: ಪ್ರಧಾನಿ ಮೋದಿ

ಹೊಸದಿಲ್ಲಿ, ಸೆ.29: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನಕ್ಕೆ ಬಜೆಟ್ ಅನುದಾನವನ್ನು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಐಐಎಂಎಸ್‌ನಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಕೈಗೊಂಡಿರುವ ಅಭೂತಪೂರ್ವ ನಿರ್ಧಾರ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ‘ಶಿಕ್ಷಣ ಕ್ಷೇತ್ರದ ಸೈದ್ಧಾಂತಿಕ ನಾಯಕತ್ವದ ಪುನರುಜ್ಜೀವನ ’ ಎಂಬ ವಿಷಯದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು.
ಸಮ್ಮೇಳನದಲ್ಲಿ ದೇಶದ 350ಕ್ಕೂ ಉನ್ನತ ಶಿಕ್ಷಣ ಸಂಸ್ಥೆಗಳ ಉಪಕುಲಪತಿಗಳು ಹಾಗೂ ನಿರ್ದೇಶಕರು ಭಾಗವಹಿಸಿದ್ದರು. ಸ್ವಾಯತ್ತತೆ ಪಡೆದ ಸಂಸ್ಥೆಗಳು ಪಠ್ಯಕ್ರಮ, ಶಿಕ್ಷಕರ ನೇಮಕಾತಿ, ಆಡಳಿತ ಮಂಡಳಿ ಸದಸ್ಯರ ನೇಮಕಾತಿ ಇತ್ಯಾದಿ ವಿಷಯಗಳ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳಬಹುದಾಗಿದೆ. ಈ ನಿರ್ಧಾರಗಳಲ್ಲಿ ಸರಕಾರದ ಪಾತ್ರ ಇರುವುದಿಲ್ಲ ಎಂದು ಮೋದಿ ತಿಳಿಸಿದರು. ಉನ್ನತ ಶಿಕ್ಷಣ ಕ್ಷೇತ್ರದ ಪರಿವರ್ತನೆಯ ನಿಟ್ಟಿನಲ್ಲಿ ಸಚಿವಾಲಯವು ಕ್ರಿಯಾನೀತಿಯೊಂದನ್ನು ರೂಪಿಸಿದೆ. ವಿದ್ಯಾಭ್ಯಾಸ ಮತ್ತು ಜ್ಞಾನ ಸಂಪಾದನೆ ಕೇವಲ ಪುಸ್ತಕಕ್ಕೆ ಸೀಮಿತವಾಗಬಾರದು. ನಮ್ಮ ಪ್ರಾಚೀನ ವಿವಿಗಳಾದ ತಕ್ಷಶಿಲಾ, ನಳಂದ ಮತ್ತು ವಿಕ್ರಮಶಿಲಾಗಳಲ್ಲಿ ಓದು ಮತ್ತು ಸಂಶೋಧನೆಗೆ ಸಮಾನ ಮಹತ್ವ ನೀಡಲಾಗುತ್ತಿತ್ತು.
ಶಾಲಾ ಮಕ್ಕಳಲ್ಲಿ ಸಂಶೋಧನೆಯತ್ತ ಒಲವು ಮೂಡಿಸುವ ನಿಟ್ಟಿನಲ್ಲಿ ‘ಅಟಲ್ ಕಲ್ಪನಾ ಪ್ರಯೋಗಾಲಯ’ಗಳನ್ನು ಶಾಲೆಗಳಲ್ಲಿ ಆರಂಭಿಸಲಾಗಿದೆ. ಶಾಲೆ, ಕಾಲೇಜುಗಳಲ್ಲಿ ಪಡೆದ ಜ್ಞಾನವನ್ನು ದೇಶದ ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕು . ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆಗೆ ಸರಕಾರ ನಿರ್ಧರಿಸಿದೆ. ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2022ರ ವೇಳೆಗೆ 1 ಲಕ್ಷ ಕೋಟಿ ರೂ. ವಿನಿಯೋಗಿಸಲಾಗುವುದು. ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶದಿಂದ ಸರಕಾರ ‘ಎಚ್‌ಇಎಫ್‌ಎ’ (ಹೈ ಎಜುಕೇಷನ್ ಫಂಡಿಂಗ್ ಏಜೆನ್ಸಿ) ಆರಂಭಿಸಿದ್ದು ಇವು ಆರ್ಥಿಕ ನೆರವು ಒದಗಿಸಲಿದೆ ಎಂದು ಮೋದಿ ಹೇಳಿದರು.







