ಕೊಡಗಿನ ಭೂಮಿಯನ್ನು ಮಾರದಿರಿ : ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಮನವಿ
‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ
ಮಡಿಕೇರಿ,ಸೆ.29 :ಶಿಕ್ಷಣ ಪಡೆದು ಹೊರ ಜಿಲ್ಲೆ ಸೇರಿದಂತೆ ವಿಶ್ವದ ಯಾವುದೇ ಭಾಗದಲ್ಲಿ ನೆಲೆಸಿರುವ ಕೊಡವ ಬಾಂಧವರು ಕೊಡಗಿನೊಂದಿಗಿನನ ಸಂಬಂಧವನ್ನು ಉಳಿಸಿಕೊಳ್ಳಬೇಕು. ಪ್ರಸ್ತುತ ಕೃಷಿಯಿಂದ ಆದಾಯವಿಲ್ಲವೆನ್ನುವ ಕಾರಣದಿಂದ ಅದನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಇಲ್ಲಿನ ಜಾಗವನ್ನು ಮಾರಾಟ ಮಾಡದೆ, ಆ ಜಾಗವನ್ನು ಬಳಸಿಕೊಂಡು ಯಾವುದಾದರು ಉದ್ಯಮದ ಆರಂಭಕ್ಕೆ ಯೋಜನೆಗಳನ್ನು ರೂಪಿಸಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಮನವಿ ಮಾಡಿದ್ದಾರೆ.
ಕೊಡವ ವಿದ್ಯಾನಿಧಿ ವತಿಯಿಂದ ನಗರದ ಕೆಳಗಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿಗೆ ಸಂಬಂಧಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉನ್ನತ ಶಿಕ್ಷಣವನ್ನು ಪಡೆದು ಬದುಕನ್ನು ಜಿಲ್ಲೆಯ ಹೊರ ಭಾಗದ ಎಲ್ಲಿಯಾದರು ಕಟ್ಟಿಕೊಳ್ಳಿ. ಆದರೆ, ಕೊಡಗನ್ನು ಮರೆಯದಿರಿ, ಇಲ್ಲಿರುವ ಜಾಗವನ್ನೆಂದಿಗೂ ಮಾರದಿರಿ ಎಂದು ಕಿವಿಮಾತು ಹೇಳಿದರು. ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಹಲವೆಡೆಗಳಲ್ಲಿ ಗುಡ್ಡಗಳು ಕುಸಿದಿವೆ. ಇಂತಹ ಪ್ರದೇಶಗಳಲ್ಲಿ ಏನು ಮಾಡಬಹುದು ಎನ್ನುವ ಬಗ್ಗೆ ಸರ್ಕಾರ ಸೇರಿದಂತೆ ಅರಣ್ಯ ಕಾಲೇಜಿನಲ್ಲಿ ಚಿಂತನೆಗಳು ನಡೆಯುತ್ತಿರುವುದಾಗಿ ತಿಳಿಸಿದರು.
ಉದ್ಯೋಗಾಧಾರಿತ ತರಭೇತಿಗೆ ಆಸಕ್ತರಾಗಿ- ಜಿಲ್ಲೆಯಲ್ಲಿನ ಎಸ್‍ಎಸ್‍ಎಲ್‍ಸಿ, ಪಿಯುಸಿ , ಪದವಿ ಮಾಡಿದ ಯುವ ಸಮೂಹಕ್ಕೆ ಕೃಷಿ ಆಧಾರಿತ ಉದ್ಯೋಗ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ತರಬೇತಿಯನ್ನು ನೀಡುವ ಬಗ್ಗೆ ಕೊಡವ ವಿದ್ಯಾನಿಧಿ ಚಿಂತಿಸಬೇಕು. ಬಾಳುಗೋಡಿನ ಕೊಡವ ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ಇಂತಹ ತರಬೇತಿ ನಡೆಸುವುದಕ್ಕೆ ತಾನು ಮಾತುಕತೆ ಮಾಡಲು ಸಿದ್ಧವಿರುವುದಾಗಿಯೂ ಸ್ಪಷ್ಟಪಡಿಸಿದರು.
ಮಕ್ಕಳ ಮೇಲೆ ಒತ್ತಡ ಹೇರದಿರಿ- ಮಕ್ಕಳು ಕಷ್ಟಪಟ್ಟು ಓದುವುದರ ಬದಲಾಗಿ, ಇಷ್ಟ ಪಟ್ಟು ಓದುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಇಚ್ಛೆಯಂತೆ ಮಕ್ಕಳನ್ನು ರೂಪಿಸಲು ಅವರ ಮೇಲೆ ಒತ್ತಡ ಹೇರುವುದು ಒಳಿತಲ್ಲ. ಬದಲಾಗಿ, ಮಕ್ಕಳು ಕಾಣುವ ಕನಸಿಗೆ ನೀರೆರೆದು ಪೋಷಿಸಬೇಕೆಂದು ಕಿವಿಮಾತುಗಳನ್ನಾಡಿದರು.
ಪ್ರಸ್ತುತ ಕೊಡಗಿನಲ್ಲಿ ಅರಣ್ಯ ಕಾಲೇಜು, ದಂತ ವೈದ್ಯಕೀಯ, ವೈದ್ಯಕೀಯ ಕಾಲೇಜ್ , ಇಂಜಿನಿಯರಿಂಗ್ ಸೇರಿದಂತೆ ಶಿಕ್ಷಣದ ಅವಕಾಶಗಳು ಮುಕ್ತವಾಗಿ ದೊರಕುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯ. ಪ್ರಸ್ತುತ ಅರಣ್ಯ ಮಹಾವಿದ್ಯಾಲಯದಲ್ಲಿ 258 ವಿದ್ಯಾರ್ಥಿಗಳಿದ್ದು, ಇವರಲ್ಲಿ ಕೊಡಗಿಗೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 4 ಎಂದು ವಿಷಾದಿಸಿ, ಈ ಬಗ್ಗೆ ಇಲ್ಲಿನ ವಿದ್ಯಾರ್ಥಿಗಳು ಗಮನಿಸಿ ಲಭ್ಯ ಅವಕಾಶಗಳ ಸದುಪಯೋಗಕ್ಕೆ ಮುಂದಾಗಬೇಕೆಂದರು.
ಮಕ್ಕಳ ಶಿಕ್ಷಣಕ್ಕೆ ಪೋಷಕರು ಒತ್ತು ನೀಡುವುದರೊಂದಿಗೆ, ಅವರಿಗೆ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ ಅವರು ಮತ್ತು ಅವರ ಸಾಹಿತ್ಯದ ಬಗ್ಗೆ ಅಭಿಮಾನವನ್ನು ಮೂಡಿಸುವ ಕೆಲಸವಾಗಬೇಕು. ಇಲ್ಲದಿದ್ದಲ್ಲಿ ಮಕ್ಕಳಲ್ಲಿ ಕೊಡಗಿನ ಬಗ್ಗೆ ಅಭಿಮಾನ ಮೂಡುವುದಾದರು ಹೇಗೆಂದು ಪ್ರಶ್ನಿಸಿದರು.
ಸಮುದಾಯದ ರಾಯಭಾರಿಗಳು- ಕೊಡವ ವಿದ್ಯಾನಿಧಿ ಶತಮಾನಕ್ಕೂ ಹೆಚ್ಚಿನ ಅವಧಿಯಿಂದ ಕೊಡವ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ವಿದ್ಯಾನಿಧಿಯಿಂದ ನೆರವು ಪಡೆಯುವ ವಿದ್ಯಾರ್ಥಿಗಳು ವಿದ್ಯಾನಿಧಿ ಮತ್ತು ಕೊಡವ ಸಮುದಾಯದ ರಾಯಭಾರಿಗಳೇ ಆಗಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಶ್ರದ್ಧೆಯ ಕಾರ್ಯದಿಂದ ಯಶಸ್ಸು ಸಾಧ್ಯ- ವೀರಾಜಪೇಟೆ ದಂತ ವ್ಯದ್ಯಕೀಯ ಕಾಲೇಜಿನ ಡೀನ್ ಡಾ. ಕಂಜಿತಂಡ ಸುನಿಲ್ ಮುದ್ದಯ್ಯ ಮಾತನಾಡಿ, ಆರೋಗ್ಯಯುತವಾದ ಸಂತಸದ ಬದುಕನ್ನು ಬದುಕಿನುದ್ದಕ್ಕೂ ಕಂಡು ಕೊಳ್ಳುವ ಪ್ರಯತ್ನ ಮಾಡದೆ, ಯಾವತ್ತೂ ಇಲ್ಲದುದರತ್ತವೆ ಲಕ್ಷ್ಯ ವಹಿಸಿ ದೂಷಿಸುವುದು ಸಲ್ಲ. ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಕಂಡು ಕೊಂಡು, ಅದರ ಸಾಧನೆಗೆ ನಗು ನಗುತ್ತಲೆ ಕ್ರಿಯಾಶೀಲರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಇದನ್ನೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತಿಳಿಸಿರುವುದು. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದು ತಿಳಿಸಿದರು.
ಪ್ರತಿಯೊಬ್ಬರು ಅವರವರ ಬದುಕನ್ನು ಅವರವರೇ ರೂಪಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಕೊರತೆಗಳ ಪಟ್ಟಿ ಮಾಡುತ್ತ ಹೋಗುವುದಕ್ಕೆ ಬದಲಾಗಿ, ಸಂತಸದಿಂದಲೆ ಲಭ್ಯ ಅವಕಾಶಗಳನ್ನು ಬಳಸಿಕೊಂಡು ಶ್ರದ್ಧೆಯ ಕಾರ್ಯನಿರ್ವಹಣೆಯ ಮೂಲಕ ಮುನ್ನಡೆಯಬೇಕೆಂದರು.
ಸನ್ಮಾನ-ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಂಜಿತಂಡ ಸುನಿಲ್ ಮುದ್ದಯ್ಯ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡಾ. ಚೆಪ್ಪುಡಿರ ಕಿರಣ್ ಕುಶಾಲಪ್ಪ ಅವರನ್ನು ಕೊಡಗು ವಿದ್ಯಾನಿಧಿಯ ಮೂಲಕ ಇದೇ ಸಂದರ್ಭ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮತ್ತು ಉಪಾಧ್ಯಕ್ಷ ಕೆ.ಎಸ್. ದೇವಯ್ಯ ಅವರು ಸನ್ಮಾನಿಸಿ ಗೌರವಿಸಿದರು.
ಪ್ರತಿಭಾ ಪುರಸ್ಕಾರ : ಕಳೆದ 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ಉನ್ನತ ವ್ಯಾಸಂಗಗಳಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿ ಸಾಧನೆ ಮಾಡಿದ 25 ವಿದ್ಯಾರ್ಥಿಗಳನ್ನು ಕೊಡವ ವಿದ್ಯಾನಿಧಿಯಿಂದ ಪುರಸ್ಕರಿಸಲಾಯಿತು.
ಕೊಡವ ವಿದ್ಯಾನಿಧಿಯ ಅಧ್ಯಕ್ಷರಾದ ಕೆ.ಪಿ. ಉತ್ತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಸ್.ದೇವಯ್ಯ, ಕಾರ್ಯದರ್ಶಿ ಎಂ.ಪಿ. ಕಾವೇರಿಯಪ್ಪ ಉಪಸ್ಥಿತರಿದ್ದರು.