ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅನನ್ಯ: ದೇವರಾಜ್ ಶೆಟ್ಟಿ
ಚಿಕ್ಕಮಗಳೂರು, ಸೆ.29: ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಇರುವ ಸಾಹಿತಿಗಳು, ಕಲಾವಿದರು ಮತ್ತು ಸಂಗೀತಗಾರರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಅವರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಸಲಹೆ ಮಾಡಿದರು.
ಸ್ವರ ಮಾಧುರ್ಯ ಸುಗಮ ಸಂಗೀತ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಇಲ್ಲಿನ ಜಯನಗರದ ಶ್ರೀ ಸಂಕಷ್ಟಹರ ಬಲಮುರಿ ಗಣಪತಿ ದೇವಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ನಡುವೆ ಇರುವ ಅನೇಕರಲ್ಲಿ ಬಹಳಷ್ಟು ಪ್ರತಿಭೆಗಳಿವೆ, ಸಾಹಿತಿಗಳು, ಸಂಗೀತಗಾರರು, ಕಲಾವಿದರು ಸಮಾಜದಲ್ಲಿದ್ದಾರೆ, ಅವರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳು ಇಲ್ಲದಿರುವುದರಿಂದಾಗಿ ಬೆಳಕಿಗೆ ಬಾರದೇ ಅಜ್ಞಾತವಾಗಿ ಉಳಿದಿದ್ದಾರೆ ಎಂದ ಅವರು ಇಂತಹವರನ್ನು ಗುರುತಿಸಿ ವೇದಿಕೆ ಕಲ್ಪಿಸಿದಲ್ಲಿ ಅವರು ಬೆಳಕಿಗೆ ಬರಲು ಸಾಧ್ಯವಾಗುತ್ತವೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಈ ದೇವಾಲಯವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವ ಉದ್ಧೇಶದಿಂದ ದೇವಾಲಯದಲ್ಲಿ ಪ್ರತಿ ತಿಂಗಳು ಸುಗಮ ಸಂಗೀತ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಸಮಾರಂಭದ ನಂತರ ಗಾಯಕರಿಂದ ಭಾವಗೀತೆ, ಭಕ್ತಿಗೀತೆ ಮತ್ತು ಜಾನಪದ ಗೀತೆಗಳ ಗಾಯನ ನಡೆಯಿತು.
ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜ್, ದೇವಾಲಯ ಸಮಿತಿಯ ಸಹಕಾರ್ಯದರ್ಶಿ ಈರೇಗೌಡ ಉಪಸ್ಥಿತರಿದ್ದರು.
ವಾಸಂತಿ ಪದ್ಮನಾಬ್ ಕಾರ್ಯಕ್ರಮವನ್ನು ನಿರೂಪಿಸಿದರು, ಸುಜಾತಾ ಸುರೇಶ್ ಸ್ವಾಗತಿಸಿದರು, ಮೋಹನ ಕುಮಾರಿ ವಂದಿಸಿದರು.