ರೈತರನ್ನು ಕತ್ತಲೆಗೆ ತಳ್ಳಿದ ಕೇಂದ್ರ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್

ತುಮಕೂರು, ಸೆ.29: ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದ್ದು, ಮುಖ್ಯಮಂತ್ರಿಗಳು ಸರಕಾರದ ಮುಖ್ಯಕಾರ್ಯದರ್ಶಿಗಳ ಮೂಲಕ ಬ್ಯಾಂಕ್‍ಗಳಿಗೆ ಎಚ್ಚರಿಕೆ ಘಂಟೆ ರವಾನಿಸುವಂತೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಸರಕಾರ ಸಾಲಮನ್ನಾ ಮಾಡುವ ತೀರ್ಮಾನ ಘೋಷಿಸಿದ ನಂತರವೂ ಬ್ಯಾಂಕ್‍ಗಳು ನೋಟೀಸ್ ಜಾರಿ ಮಾಡುತ್ತಿದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸಾಲಮನ್ನಾ ಕುರಿತಂತೆ ನಿಗದಿಪಡಿಸಿರುವ ಕಟ್‍ಆಫ್ ಡೇಟ್ ಮತ್ತು ಬೆಳೆ ಸಾಲ ಎಂಬ ಮುಖ್ಯಮಂತ್ರಿಯವರ ಗೊಂದಲದ ಹೇಳಿಕೆಗಳು ರೈತರನ್ನು ಆತಂಕಕ್ಕೀಡು ಮಾಡಿವೆ. ಇದರ ಭಾಗವಾಗಿಯೇ ಮಂಡ್ಯದ ರೈತ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದ್ದು, ಈ ಆತ್ಮಹತ್ಯೆಗೆ ಮುಖ್ಯಮಂತ್ರಿಗಳು, ಸರಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಇವರಲ್ಲಿ ಯಾರನ್ನು ಹೊಣೆ ಮಾಡಬೇಕೆಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಒಂದು ನೆರೆ ಇದೆ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕೆಲವು ಭಾಗಗಳು ನೆರೆಯಿಂದ ಕೊಚ್ಚಿ ಹೋಗಿ ಜನತೆ ತತ್ತರಿಸಿದ್ದಾರೆ. ಮತ್ತೊಂದೆಡೆ 16 ಜಿಲ್ಲೆಗಳಲ್ಲಿ ಬರ ಮುಂದುವರೆದಿದೆ. ಇದರ ಜೊತೆಗೆ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ಹೆಸರು, ಉದ್ದು ಮತ್ತಿತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಬೆಂಬಲ ಬೆಲೆಯಲ್ಲಿ ಖರೀದಿಸುವರು ಒಬ್ಬ ರೈತನಿಗೆ 4 ಕ್ವಿಂಟಾಲ್ ಎಂದು ತೀರ್ಮಾನಿಸಿದ್ದು, ರೈತ ಬೆಳೆದ ಉಳಿದ ಬೆಳೆಯನ್ನು ಏನು ಮಾಡಬೇಕೆಂಬ ಪ್ರಶ್ನೆ ಕಾಡುತ್ತಿದೆ, ಇದುವರೆಗೆ ಕಬ್ಬಿನ ದರ ನಿಗದಿಯಾಗಿಲ್ಲ, ಈಗಾದರೆ ರೈತರ ಕಲ್ಯಾಣ ಸಾಧ್ಯವೇ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ರೈತರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಭಾರತವನ್ನು ಪ್ರಕಾಶಿಸುವಂತೆ ಮಾಡುವ ಭ್ರಮೆಯಲ್ಲಿರುವ ಕೇಂದ್ರ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಟ್ಟಿದೆ. ಇದರ ವಿರುದ್ಧ 2019ರ ಮಾರ್ಚ್ 29 ಮತ್ತು 30ರಂದು ದೆಹಲಿಯಲ್ಲಿ ಬೃಹತ್ ರಾಷ್ಟ್ರೀಯ ಚಳುವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆನಂದ್ ಪಟೇಲ್,ಕೆಂಕೆರೆ ಸತೀಶ್, ದೇವರಾಜು, ಶಿವರತ್ನ, ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.







