ಮತ್ತೊಮ್ಮೆ ಗಾಯದ ಸಮಸ್ಯೆಗೆ ಒಳಗಾದ ಕೇದಾರ್ ಜಾಧವ್

ದುಬೈ, ಸೆ.29: ಬಾಂಗ್ಲಾದೇಶ ವಿರುದ್ಧ ಏಶ್ಯಕಪ್ ಫೈನಲ್ ಪಂದ್ಯದ ವೇಳೆ ಭಾರತ ರನ್ ಚೇಸಿಂಗ್ ಮಾಡುತ್ತಿದ್ದಾಗ ಆಲ್‌ರೌಂಡರ್ ಕೇದಾರ್ ಜಾಧವ್ ಸ್ನಾಯು ಸೆಳೆತಕ್ಕೆ ಒಳಗಾದರು. ಈ ಮೂಲಕ ಮಹಾರಾಷ್ಟ್ರದ ಆಟಗಾರನಿಗೆ ಮತ್ತೊಮ್ಮೆ ಗಾಯದ ಸಮಸ್ಯೆ ಎದುರಾಗಿದೆ.
ಜಾಧವ್ ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಸುಮಾರು 3 ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದರು. ಆದರೆ, ಏಶ್ಯಕಪ್ ಫೈನಲ್ ಪಂದ್ಯದ ವೇಳೆ ಕ್ಷಿಪ್ರವಾಗಿ ಒಂದು ರನ್ ಪಡೆಯುವ ವೇಳೆ ಮತ್ತೆ ನೋವು ಮರುಕಳಿಸಿದೆ. ನೋವು ಕಾಣಿಸಿಕೊಂಡ ತಕ್ಷಣ ಫಿಸಿಯೊ ಪ್ಯಾಟ್ರಿಕ್ ಫಹರ್ಟ್ ರಿಂದ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಲು ನಿರ್ಧರಿಸಿದರು. ಆದರೆ, ಪಂದ್ಯದ ಮಧ್ಯೆಯೇ ಗಾಯಾಳು ನಿವೃತ್ತಿಯಾದರು. ಭಾರತ 223 ರನ್ ಬೆನ್ನಟ್ಟುವಾಗ ಜಾಧವ್ ಅಗತ್ಯ ಉಂಟಾದ ಕಾರಣ ಮತ್ತೆ ಕ್ರೀಸ್‌ಗೆ ವಾಪಸಾಗಿ ಬಾಂಗ್ಲಾ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ತಂದುಕೊಡಲು ನೆರವಾದರು. ‘‘ಕೇದಾರ್ ಜಾಧವ್ ಬಲಗಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವರ ಕಾಲಿನ ಸ್ಕಾನಿಂಗ್ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಹೆಚ್ಚಿನ ವರದಿ ಕೈಸೇರಲಿದೆ’’ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದ ಜಾಧವ್‌ಗೆ ಐಪಿಎಲ್ ಟೂರ್ನಿಯ ಮೊದಲ ಪಂದ್ಯದ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದ ಜಾಧವ್, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಿಂದಲೂ ದೂರವುಳಿಯಬೇಕಾಯಿತು.





