ಪಶ್ಚಿಮ ಘಟ್ಟದಲ್ಲಿ ಹಲ್ಲಿಯ ಹೊಸ ಎರಡು ಪ್ರಭೇದ ಪತ್ತೆ

ಬೆಂಗಳೂರು, ಸೆ. 29: ಪಶ್ಚಿಮ ಘಟ್ಟದಲ್ಲಿ ವಿಜ್ಞಾನಿಗಳು ಹಲ್ಲಿಯ ಎರಡು ಹೊಸ ಪ್ರಭೇದಗಳನ್ನು ಪತ್ತೆಹಚ್ಚಿದ್ದು ಘಟ್ಟ ಪ್ರದೇಶವು ಜೀವವೈವಿಧ್ಯದ ಆಗರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದಲ್ಲಿ ಕಂಡುಬರುವ ಉದ್ದನೆಯ ದೇಹ ಮತ್ತು ಬಾಲವನ್ನು ಹೊಂದಿರುವ, ಬಲಿಷ್ಟ ಕಾಲುಗಳುಳ್ಳ ಹಲ್ಲಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಮತ್ತು ಸೆಂಟರ್ ಫೋರ್ ಈಕಲಾಜಿಕಲ್ ಸೈನ್ಸಸ್,ಐಐಎಸ್ಸಿ, ಬೆಂಗಳೂರು ಇದರ ತಂಡವು ಮೊಂಟನೆ ಅರಣ್ಯ ಹಲ್ಲಿ ಮತ್ತು ಮುಳ್ಳು ತಲೆಯ ಅರಣ್ಯ ಹಲ್ಲಿಯೆಂಬ ಹೊಸ ಪ್ರಭೇದವನ್ನು ಪತ್ತೆಹಚ್ಚಿದ್ದಾರೆ.
ಪ್ರಾಣಿ ಅಧ್ಯಯನಕಾರರ ವಿಶ್ಲೇಷಣೆಗಳನ್ನು ಪ್ರಕಟಿಸುವ ಪಾಕ್ಷಿಕ ಝೂಟಾಕ್ಸಾದಲ್ಲಿ ಈ ತಂಡದ ಲೇಖನ ಪ್ರಕಟವಾಗಿದೆ. ಈ ಎರಡು ಪ್ರಭೇದಗಳನ್ನು ಕಳೆದ 150 ವರ್ಷಗಳಿಂದ ಸಾಮಾನ್ಯ ಹಲ್ಲಿಯೆಂದು ನಂಬಲಾಗಿತ್ತು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಈ ಹಲ್ಲಿಗಳ ಕೊರಳಿನ ಸುತ್ತ ಚರ್ಮದ ವಿಭಿನ್ನ ಪದರ ಇರುವ ಕಾರಣ ಸಂಶೋಧಕರು ಇದಕ್ಕೆ ಮೊನಿಲೆಸಾರಸ್ ಎಂದು ಹೆಸರಿಟ್ಟಿದ್ದಾರೆ. ಈ ಅಧ್ಯಯನವು ಭಾರತೀಯ ಸರಿಸೃಪಗಳ ಸಂಬಂಧವನ್ನು ಅರ್ಥಮಾಡಿಕೊಳ್ಳುವಲ್ಲಿರುವ ಗಮನಾರ್ಹ ಕೊರತೆಯನ್ನು ಬಹಿರಂಗಪಡಿಸಿದೆ ಮತ್ತು ಭಾರತೀಯ ಹಲ್ಲಿಗಳ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ತೋರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.







