2 ದಶಕಗಳ ಹಿಂದೆಯೇ ಶಬರಿಮಲೆಗೆ ಭೇಟಿ ನೀಡಿದ್ದ ಈ ಮಹಿಳಾ ಅಧಿಕಾರಿಯ ಬಗ್ಗೆ ನಿಮಗೆಷ್ಟು ಗೊತ್ತು…

ತಿರುವನಂತಪುರಂ, ಸೆ.30: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸರ್ವೋಚ್ಚ ನ್ಯಾಯಾಲಯವು ಆದೇಶ ಹೊರಡಿಸಿದ ಎರಡು ದಶಕಗಳ ಹಿಂದೆಯೇ ಮಹಿಳಾ ಐಎಎಸ್ ಅಧಿಕಾರಿ ತನ್ನ ಕರ್ತವ್ಯದ ಅಂಗವಾಗಿ ಕೇರಳ ಉಚ್ಚ ನ್ಯಾಯಾಲಯದ ವಿಶೇಷ ಆದೇಶದೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದರು.
ಆಗ ಪಟ್ಟಣಂಥಿಟ್ಟ ಜಿಲ್ಲಾಧಿಕಾರಿಯಾಗಿದ್ದ ಕೆ.ಬಿ.ವಲ್ಸಲಾ ಕುಮಾರಿ ಅವರು 1994-95ರಲ್ಲಿ ತನ್ನ 41ನೇ ವರ್ಷ ಪ್ರಾಯದಲ್ಲಿ ವಾರ್ಷಿಕ ಶಬರಿಮಲೆ ಯಾತ್ರೆಯ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಸಂಪ್ರದಾಯವಾದಿಗಳ ಬೆದರಿಕೆಗಳು ಮತ್ತು ದುರ್ಗಮ ಪ್ರದೇಶವನ್ನು ಲೆಕ್ಕಿಸದೆ ಕನಿಷ್ಠ ನಾಲ್ಕು ಬಾರಿ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿದ್ದರು.
ಕುಮಾರಿಯವರ ಭೇಟಿಗೂ ಯಾತ್ರೆಗೂ ಸಂಬಂಧ ಕಲ್ಪಿಸಬೇಕಿಲ್ಲ,ಅವರ ಭೇಟಿಯು ಜಿಲ್ಲಾಧಿಕಾರಿಗಳಾಗಿ ಅವರ ಕರ್ತವ್ಯದ ಭಾಗವಾಗಿದೆ ಎಂದು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿತ್ತು.
ಗರ್ಭಗುಡಿಗೆ ಸಾಗುವ ಪವಿತ್ರ 18 ಮೆಟ್ಟಿಲುಗಳನ್ನು ಹತ್ತದಂತೆ ಅವರಿಗೆ ಸೂಚಿಸಲಾಗಿತ್ತು. ಉಚ್ಚ ನ್ಯಾಯಾಲಯದ ಆದೇಶದಿಂದಾಗಿ ಆ ವಯಸ್ಸಿನಲ್ಲಿ ತಾನು ಶಬರಿಮಲೆಗೆ ಭೇಟಿ ನೀಡಲು ಸಾಧ್ಯವಾಗಿತ್ತು. ಈಗ ಸರ್ವೋಚ್ಚ ನ್ಯಾಯಾಲಯವು ಎಲ್ಲ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶವನ್ನು ಮುಕ್ತಗೊಳಿಸಿದೆ. ಇದು ನಿಜಕ್ಕೂ ಒಳ್ಳೆಯ ತೀರ್ಪು ಎಂದು ಕುಮಾರಿ ಹೇಳಿದರು.
ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆಯಾಗಿರುವ ಕುಮಾರಿ ಕಾನೂನಿನ ಬೆಂಬಲದೊಂದಿಗೆ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮೊದಲ ಮಹಿಳೆಯಾಗಿದ್ದರು.
ತನಗೆ 50 ವರ್ಷಗಳಾದ ಬಳಿಕವಷ್ಟೇ ತಾನು ಪವಿತ್ರ ಮೆಟ್ಟಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸಿದ್ದೆ ಎಂದು ಈಗ ಸೇವೆಯಿಂದ ನಿವೃತ್ತರಾಗಿರುವ ಕುಮಾರಿ ತಿಳಿಸಿದರು.
ನ್ಯಾಯಾಲಯದ ಆದೇಶದೊಂದಿಗೆ ತಾನು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಿದಾಗ ಪವಿತ್ರ ಮೆಟ್ಟಲುಗಳನ್ನು ಹತ್ತಿ ದೇವರನ್ನು ನೋಡಲು ಅನುಮತಿಯಿರಲಿಲ್ಲ. ಆದರೆ ತಾನು ಪವಿತ್ರ ಮೆಟ್ಟಿಲುಗಳ ಕೆಳಗೆ ಕೆಲಕಾಲ ಕೈಜೋಡಿಸಿಕೊಂಡು ನಿಂತು ದೇವರ ಧ್ಯಾನ ಮಾಡಿದ್ದೆ ಎಂದು ಅವರು ನೆನಪಿಸಿಕೊಂಡರು.
ಕುಮಾರಿ ಭೇಟಿ ನೀಡಿದ್ದಾಗ ಕ್ಷೇತ್ರದಲ್ಲಿ ವರ್ಷಗಳಿಂದಲೂ ತ್ಯಾಜ್ಯವಸ್ತುಗಳ ರಾಶಿ ಹಾಗೆಯೇ ಉಳಿದುಕೊಂಡಿತ್ತು. ಬಳಿಕ ಸರಕಾರವು ಅಲ್ಲಿ ಕೈಗೊಂಡಿದ್ದ ಬೃಹತ್ ನೈರ್ಮಲ್ಯ ಅಭಿಯಾನದ ಹೊಣೆಯನ್ನು ಅವರಿಗೇ ವಹಿಸಲಾಗಿತ್ತು.
ಪರಿಸರ ಸೂಕ್ಷ್ಮ ಶಬರಿಮಲೆ ಬೆಟ್ಟದಲ್ಲಿ ಪರಿಸರ ಸ್ನೇಹಿ ಶೌಚಾಲಯಗಳನ್ನು ಪರಿಚಯಿಸಿದ್ದ ಕುಮಾರಿ ಪಂಪಾ ಸರೋವರವನ್ನು ಸ್ವಚ್ಛಗೊಳಿಸಲು ಉಪಕ್ರಮಗಳನ್ನ ಕೈಗೊಂಡಿದ್ದರು,ಶಬರಿಮಲೆ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿದ್ದರು.







