ಸಿದ್ದರಾಮಯ್ಯರ ರಾಜಕೀಯ ಹೇಳಿಕೆಗೆ ಪ್ರತಿಕ್ರಿಯಿಸಲಾರೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು, ಸೆ. 30: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ನೀಡಿರುವ ಹೇಳಿಕೆಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಮೈಸೂರು ದಸರಾ ಉತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಆಯೋಜಿಸಿದ್ದ ವಿಂಟೇಜ್ ಕಾರು ರ್ಯಾಲಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯನವರು ಯಾವ ಕಾರಣಕ್ಕೆ ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿಕೆ ನೀಡಿದ್ದಾರೆಂಬುದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ನಿನ್ನೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 'ರಾಹು-ಕೇತುಗಳು ಒಂದಾಗಿ ತನ್ನನ್ನು ಸೋಲಿಸಿದರು' ಎಂಬ ಹೇಳಿಕೆ ಪ್ರತಿಕ್ರಿಯಿಸಿದರು.
ಬಿಸಿ ತುಪ್ಪದ ರುಚಿ: ಮೂರ್ನಾಲ್ಕು ತಿಂಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಬಿಸಿ ತುಪ್ಪದ ರುಚಿ ನೋಡಲು ಮಾಧ್ಯಮಗಳು ಅವಕಾಶ ಕಲ್ಪಿಸಿದ್ದವು. ಇದೀಗ ಮತ್ತೊಂದು ಬಿಸಿ ತುಪ್ಪದ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನಿಸಿದರು.
ಸರಕಾರದಿಂದ ವ್ಯವಸ್ಥೆ: ಹಳೆಯ ಐತಿಹಾಸಿಕ ಕಾರುಗಳ ಪ್ರದರ್ಶನ ಮಾಡಲಾಗುತ್ತಿದ್ದು, ಎರಡು ದಿನಗಳ ಕಾಲ ಮೈಸೂರಿನಲ್ಲಿ ವಿಂಟೇಜ್ ಕಾರು ಪ್ರದರ್ಶಕರು ಉಳಿಯಲಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ವಿಂಟೇಜ್ ಕಾರು ಪ್ರದರ್ಶನ ಮಾಡಲಿದ್ದು, ಪ್ರದರ್ಶನಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಲಂಡನ್, ಫ್ರಾನ್ಸ್, ಶ್ರೀಲಂಕಾ ಸೇರಿದಂತೆ ದೇಶ-ವಿದೇಶದ ಹಲವು ಪ್ರಮುಖರು ವಿಶೇಷ ಕಾರುಗಳನ್ನು ರ್ಯಾಲಿಯಲ್ಲಿ ಬಳಸುತ್ತಿದ್ದಾರೆ. ಹಳೆಯ ಕಾರುಗಳನ್ನು ನೋಡಿದರೆ ಇಂಥ ಕಾರುಗಳು ಇದ್ದವೇ ಎಂದು ಆಶ್ಚರ್ಯವಾಗುತ್ತದೆ. 1924ರಷ್ಟು ಹಳೆಯ ಕಾರುಗಳು ರ್ಯಾಲಿಯಲ್ಲಿ ನೋಡಬಹುದಾಗಿದೆ ಎಂದರು.







