ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ದಲಿತ ಕುಂದುಕೊರತೆ ಸಭೆ

ಮಂಗಳೂರು, ಸೆ.30: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಉಪಾಯುಕ್ತೆ ಉಮಾ ಪ್ರಶಾಂತ್‌ರ ಅಧ್ಯಕ್ಷತೆಯಲ್ಲಿ ರವಿವಾರ ಜರುಗಿದ ದಲಿತ ಕುಂದುಕೊರತೆ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ದಲಿತ ಮುಖಂಡ ಎಸ್ಪಿ ಆನಂದ ಮಾತನಾಡಿ ಕಂದಾವರ ಗ್ರಾಪಂನಲ್ಲಿ ದಲಿತರಿಗಿರುವ ಶೇ.25 ಮೀಸಲಾತಿಯಲ್ಲಿ ಅಡುಗೆ ಅನಿಲ ಪಟ್ಟಿಯಲ್ಲಿ, ಹೊಲಿಗೆ ಮಿಷನರ್ ನೀಡುವಲ್ಲಿ ಅಕ್ರಮವಾಗಿದೆ. ಈ ಬಗ್ಗೆ ಗ್ರಾಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪೊಲೀಸ್ ಅಧಿಕಾರಿಗಳು ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಗರಿಕ ಹಕ್ಕು ಹಾಗೂ ಜಾರಿ ನಿರ್ದೇಶನಾಲಯದ ದ.ಕ.ಜಿಲ್ಲಾ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಈ ಬಗ್ಗೆ ಸಂಬಂಧಪಟ್ಟ ಗ್ರಾಪಂ ಪಿಡಿಒ ಮೂಲಕ ಮಾಹಿತಿ ತರಿಸಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಧರ್ಮಸ್ಥಳದ ಮೂವರು ವಿದ್ಯಾರ್ಥಿಗಳಿಗೆ ನರ್ಸಿಂಗ್ ಶಿಕ್ಷಣದ ನೆಪದಲ್ಲಿ ಅವಕಾಶ ನೀಡಿದ ವಿದ್ಯಾಸಂಸ್ಥೆಯು ಅವರಿಂದ ಸಮವಸಕ್ಕಾಗಿ 15 ಸಾವಿರ ರೂ. ಪಡೆದುಕೊಂಡಿದೆ. ಈಗ 3 ವರ್ಷದ ತರಬೇತಿಗೆ 1.35 ಲಕ್ಷ ರೂ. ಶುಲ್ಕ ಪಾವತಿಸಬೇಕು ಎಂದು ಒತ್ತಾಯಿಸುತ್ತಿವೆ. ಅಲ್ಲದೆ ಎಸ್ಸೆಸ್ಸೆಲ್ಸಿ, ಪಿಯುಸಿ ಮೂಲ ದಾಖಲೆಗಳನ್ನು ತಮ್ಮಲ್ಲೇ ಇಟ್ಟುಕೊಂಡಿದೆ. ವಿದ್ಯಾರ್ಥಿಗಳು ಹಣ ಪಾವತಿಸಲು ಅಸಹಾಯಕತೆ ವ್ಯಕ್ತಪಡಿಸಿದರೂ ಶಿಕ್ಷಣ ಸಂಸ್ಥೆ ಮೂಲ ದಾಖಲೆ ಪತ್ರ ನೀಡುತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೂ ಮನವಿ ಮಾಡಲಾಗಿದೆ. ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಎಸ್.ಪಿ. ಆನಂದ ಆಗ್ರಹಿಸಿದರು.
ಗಂಜಿಮಠದ ಗಣೇಶ್ ನಗರ ವ್ಯಾಪ್ತಿಯ ದಲಿತ ಕಾಲನಿಯ 35 ಸೆಂಟ್ಸ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆಯಾಗಿದೆ. ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆದರೆ ಈ ಕಟ್ಟಡ ನಿರ್ಮಾಣ ಮಾಡುವಾಗ ಮೂಲ ಸೌಕರ್ಯಕ್ಕೆ ಗಮನ ನೀಡಲಾಗಿಲ್ಲ ಎಂದು ಎಸ್.ಪಿ. ಆನಂದ ದೂರಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಡಾ. ವೇದಮೂರ್ತಿ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ದಲಿತ ಮುಖಂಡ ಶೇಖರ್ ಬೆಳ್ತಂಗಡಿ ಮಾತನಾಡಿ ಹಲವು ಸಮಯದ ಹಿಂದೆ ಜಪ್ಪಿನಮೊಗರು ಬೇಕರಿಯೊಂದರಿಂದ ನಂದಕುಮಾರ್ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ ನಂದಕುಮಾರ್ ಈತನಕ ಪತ್ತೆಯಾಗಿಲ್ಲ. ಈ ಪ್ರಕರಣ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಈ ಹಿಂದಿನ ದಲಿತ ಕುಂದುಕೊರತೆ ಸಭೆಯಲ್ಲೂ ದೂರು ನೀಡಲಾಗಿತ್ತು. ನಂದಕುಮಾರ್ ವಿಚಾರದಲ್ಲಿ ನಮಗೆ ಸ್ಪಷ್ಟ ಮಾಹಿತಿ ಬೇಕಾಗಿದೆ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಪೊಲೀಸ್ ಉಪಾಯುಕ್ತೆ ಉಮಾಪ್ರಶಾಂತ್ ಈ ಬಗ್ಗೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿ, ತ್ವರಿತ ತನಿಖೆಗೆ ಸೂಚನೆ ನೀಡಲಾಗುವುದು ಎಂದರು.
ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ಶಿವಪ್ಪ, ರಮೇಶ್ ಕೋಟ್ಯಾನ್ ವಿವಿಧ ವಿಚಾರಗಳ ಬಗ್ಗೆ ಗಮನ ಸೆಳೆದರು. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ರಾಮರಾವ್, ಉತ್ತರ ವಿಭಾಗದ ಎಸಿಪಿ ರಾಜೇಂದ್ರ, ಇನ್‌ಸ್ಪೆಕ್ಟರ್‌ಗಳಾದ ಮುಹಮ್ಮದ್ ಶರೀಫ್, ರಫೀಕ್, ಭಜಂತ್ರಿ, ರವಿ ನಾಯ್ಕಿ, ಶಿವಪ್ರಸಾದ್, ಎಸ್ಸೈ ಪ್ರದೀಪ್ ಟಿ.ಆರ್. ಉಪಸ್ಥಿತರಿದ್ದರು.







