ಹರಿಹರ ಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿಸುವುದು ನಮ್ಮ ಗುರಿ: ವಚನಾನಂದ ಸ್ವಾಮೀಜಿ

ದಾವಣಗೆರೆ,ಸೆ.30: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವನ್ನು ಕಾಯಕ, ದಾಸೋಹ, ಶಿವಯೋಗ ಕೇಂದ್ರವನ್ನಾಗಿಸುವ ಮೂಲಕ ಹರಿಹರ ಕ್ಷೇತ್ರ ಪುಣ್ಯಕ್ಷೇತ್ರವನ್ನಾಗಿಸುವುದು ನಮ್ಮ ಗುರಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ತಿಳಿಸಿದರು.
ಹರಿಹರ ಹೊರವಲಯದ ಪಂಚಮಸಾಲಿ ಪೀಠದ ಆವರಣದಲ್ಲಿ ಭಾನುವಾರ ಲಿ. ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಶ್ರೀಗಳ 81ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ನೂತನ ಶಾಸಕ, ಸಚಿವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬೇರೆ ಬೇರೆ ಮಠಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಇತಿಹಾಸವಿಲ್ಲದೇ ಶೀಘ್ರ ನಿರ್ಮಾಣಗೊಂಡು ಜಗತ್‍ಖ್ಯಾತಿಯಾಗಿ ಇತಿಹಾಸ ಸೃಷ್ಟಿಸಿರುವ ಏಕೈಕ ಪೀಠ ಪಂಚಮಸಾಲಿ. ಇದು ಯಾವ ಸಮುದಾಯವನ್ನು ತುಳಿದು, ಟೀಕೆ ಮಾಡಿ ಬೆಳೆಯುವ ಪೀಠವಲ್ಲ. ಸರ್ವಧರ್ಮವನ್ನು ಒಗ್ಗೂಡಿಸಿಕೊಂಡು ಬೆಳೆಯುತ್ತಿರುವ ಪೀಠ. ಆದ್ದರಿಂದಲೇ ನಮ್ಮ ನಾಮಫಲಕಗಳಲ್ಲಿ ಸಮಾನತೆ ಸಾರಿದ ಬಸವಣ್ಣ, ರೇಣುಕಾಚಾರ್ಯ, ಅಕ್ಕಮಹಾದೇವಿಯವರ ಭಾವಚಿತ್ರಗಳನ್ನು ಸೇರಿಸಿದ್ದೇವೆ ಎಂದು ಅವರು ಹೇಳಿದರು.
ಹರಿಹರದ ಪಂಚಮಸಾಲಿ ಪೀಠ, ಕೂಡಲ ಸಂಗಮದ ಪೀಠವೆಂದು ಬೇಧವಿಲ್ಲ. ಎಲ್ಲರೂ ಸಮಯ ಸಂದರ್ಭ ಬಂದಾಗ ಒಂದಾಗುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಉತ್ತಮ ಕೆಲಸಮಾಡಲಿ ಎಂದರು.
ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಪಂಚಮಸಾಲಿ ಸಮಾಜ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜ. ಆದ್ದರಿಂದ ಕೂಡಲಸಂಗಮ ಹಾಗೂ ಹರಿಹರ ಪೀಠಗಳ ಸಂಗಮವಾದರೆ ಸಮಾಜಕ್ಕೆ ಮತ್ತಷ್ಟು ಬಲ ಬರುತ್ತದೆ. ಈ ನಿಟ್ಟಿನಲ್ಲಿ ಶ್ರೀಗಳು, ಹಿರಿಯರು ಯೋಚಿಸಲಿ ಎಂದ ಅವರು, ಬೆಳಗಾವಿಯಿಂದ ಈವರೆಗೆ ಕಾಂಗ್ರೆಸ್‍ನಿಂದ ಯಾರೊಬ್ಬ ಲಿಂಗಾಯತರೂ ಶಾಸಕಿಯಾಗಿಲ್ಲ. ನಮ್ಮ ಸಮುದಾಯ ಕಡಿಮೆಯಿದ್ದರೂ ಮರಾಠಿಯವರು ನನ್ನ ಗೆಲುವಿಗೆ ಕೈಜೋಡಿಸಿದರು. ಇದಕ್ಕೆ ಕಾರಣ ನಮ್ಮ ಸಮಾಜದ ಆದರ್ಶ, ಸಂಸ್ಕೃತಿ. ನಾವು ಅನ್ನದಾತರು ನಮ್ಮ ನೆತ್ತಿ ಸುಟ್ಟರೂ ಎಲ್ಲರ ಹೊಟ್ಟೆ ತಣ್ಣಗಿರಿಸುವ ಕೃಷಿಕರು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಬೀಳಗಿಶಾಸಕ ಮುರುಗೇಶ್ ನಿರಾಣಿ ಮಾತನಾಡಿ, ಆರೂವರೆ ಕೋಟಿ ಕನ್ನಡಿಗರಲ್ಲಿ 80 ಲಕ್ಷ ಪಂಚಮಸಾಲಿಗಳಿದ್ದಾರೆ. ನಾವು ಗುಡಿಗಿದರೆ ವಿಧಾನಸೌಧ ನಡುಗುತ್ತದೆ. ವೀರಶೈವ ಲಿಂಗಾಯಿತರು ಒಟ್ಟು 58 ಶಾಸಕರಿದ್ದು, ಅದರಲ್ಲಿ 21 ಜನ ಶಾಸಕರು ಪಂಚಮಸಾಲಿಗಳು. ಆದರೂ, ಜನಸಂಖ್ಯೆಗನುಗುಣವಾಗಿ ನಮಗೆ ಪ್ರಾಧಾನ್ಯತೆ ದೊರೆತಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರ ಯಾವುದೇ ಇರಲಿ ನಮ್ಮ ಸಮುದಾಯದ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ತಂದು ಮಠಕ್ಕೆ 10 ಕೋಟಿ ಅನುದಾನ ಕೊಡಿಸಬೇಕು ಎಂದರು. ಪೀಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ ಪ್ರಾಸ್ಥಾವಿಕ ಮಾತನಾಡಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಸಿಸಿ ಪಾಟೀಲ, ಬಸವರಾಜ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತಿತರರು ಮಾತನಾಡಿದರು. ಇದೇ ಸಂದರ್ಭ ಎಲ್ಲಾ ಶಾಸಕ, ಸಚಿವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪೀಠದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಶಾಸಕರಾದ ಕಳಕಪ್ಪ ಬಂಡಿ, ಅರವಿಂದ ಲಿಂಬಾವಳಿ,ವಿರೂಪಾಕ್ಷಪ್ಪ ಬಳ್ಳಾರಿ, ಸಂಸದ ಶಿವಕುಮಾರ್ ಉದಾಸಿ, ಅಣಸಿ ಸಿದ್ದೇಶ್, ನಾಗನಗೌಡರು, ಮಲ್ಲಣ್ಣ ಅಂಗಡಿ, ಗುರುಶಾಂತಪ್ಪ, ಬಿ. ನಾಗನಗೌಡರು, ಪಿ.ಡಿ. ಶಿರೂರು, ಪ್ರೇಮಾ ಮತ್ತಿತರರಿದ್ದರು.
ದಾವಣಗೆರೆ:
ರಾಜ್ಯದಲ್ಲಿ ವೀರಶೈವ ಲಿಂಗಾಯಿತರು 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿದ್ದೇವೆ. ಆದರೆ, ಜಾತಿ ಸಮೀಕ್ಷೆಯಲ್ಲಿ ಕೇವಲ 80 ಲಕ್ಷ ಎಂದು ಹೇಳಲಾಗಿದ್ದು, ಲಿಂಗಾಯಿತರನ್ನು ತುಳಿವ ಹುನ್ನಾರವನ್ನು ನಾವು ಸಹಿಸುವುದಿಲ್ಲ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸರ್ಕಾರದ ವಿರುದ್ಧ ಗುಡುಗಿದರು.
ಹರಿಹರ ಹೊರವಲಯದ ಪಂಚಮಸಾಲಿ ಪೀಠದ ಆವರಣದಲ್ಲಿ ಭಾನುವಾರ ಲಿ. ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಶ್ರೀಗಳ 81ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ನೂತನ ಶಾಸಕ, ಸಚಿವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 2 ಕೋಟಿ ಇದ್ದವರು 80 ಲಕ್ಷ ಆಗಲು ಹೇಗೆ ಸಾಧ್ಯ? ಇಲ್ಲಿ ವ್ಯವಸ್ಥಿತವಾಗಿ ಲಿಂಗಾಯಿತರನ್ನು ತುಳಿಯುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ನನ್ನ ವಿರೋಧವಿದೆ. ನಮ್ಮ ಸರ್ಕಾರವೇ ಆಗಿದ್ದರೂ ಸಮಾಜದ ವಿಷಯ ಬಂದಾಗ ನಾನು ಸಮಾಜದ ಹಿತವನ್ನೇ ಬಯಸುವವನು. ನಾನು ಎಂದಿಗೂ ಸಮಾಜದ ಪರ. ಆದ್ದರಿಂದ ಈ ಜಾತಿ ಸಮೀಕ್ಷೆ ಸರಿಯಿಲ್ಲ ಎಂದು ಹೇಳಿದರು.







