ವಿವಿಗಳಲ್ಲಿ ಜಾನಪದ ಅಧ್ಯಯನ ನಡೆಯಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಸೆ.30: ಇಂದಿನ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನಪದದ ಅಧ್ಯಯನಗಳು ನಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಡೋಜ ಡಾ.ದೇಜಗೌ ಜನ್ಮಶತಮಾನೋತ್ಸವ ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸುವಲ್ಲಿ ದೇಜಗೌ ಅವರ ಪರಿಶ್ರಮ ಅಪಾರವಾದುದಾಗಿದೆ. ಅವರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಚಾರ ಮಾಡಿ ಜಾನಪದ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾಳಜಿ ವಹಿಸಿದ್ದರು. ಆದರೆ, ಇತ್ತೀಚಿಗೆ ವಿಶ್ವವಿದ್ಯಾಲಯಗಳಲ್ಲಿ ಜಾನಪದದ ಬಗ್ಗೆ ಚರ್ಚೆಗಳು ನಡೆಯದಿರುವುದು ವಿಪರ್ಯಾಸ ಎಂದು ವಿಷಾದಿಸಿದರು.
ಹಿರಿಯ ಸಾಹಿತಿ ಡಾ.ದೇ.ಜವರೇಗೌಡರ ಸಾಹಿತ್ಯಕ ಹಾಗೂ ವೈಚಾರಿಕತೆಯ ಹರಿಕಾರರಾಗಿದ್ದಾರೆ. ವಿಶ್ವ ಮಾನವೀಯ ನೆಲೆಯಲ್ಲಿ ಚಿಂತನಾಶೀಲರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಆಯಾಮವನ್ನೇ ಸೃಷ್ಟಿಸಿದ್ದರು ಎಂದು ಹೇಳಿದರು.
ನಾಡಿನ ಕವಿ ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿದ್ದ ದೇಜಗೌ, ಅವರ ಕನಸುಗಳನ್ನು ಸಾಕಾರಗೊಳಿಸಿದ ಅಪರೂಪದ ವ್ಯಕ್ತಿಯಾಗಿದ್ದಾರೆ. ಎಲ್ಲ ಧರ್ಮೀಯರು ಒಟ್ಟಿಗೆ ಕುಳಿತು ಶಿಕ್ಷಣ ಕಲಿಯಬೇಕು, ರಾಜಕಾರಣಿಗಳು ಮತಕ್ಕಾಗಿ ಧರ್ಮ, ಜಾತಿಗಳ ಹೆಸರಿನಲ್ಲಿ ಮನಸ್ಸುಗಳನ್ನು ಛಿದ್ರ ಮಾಡಬಾರದು ಎಂದು ಹೇಳುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.
ಧರ್ಮ ಜನರ ಮನಸ್ಸುಗಳನ್ನು ಛಿದ್ರ ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡದ ಮೂಲಕ ನಾಡು ಕಟ್ಟಲು ಸಾಧ್ಯ. ಹೃದಯಗಳನ್ನು ಬೆಸೆಯಲು ಸಾಧ್ಯ. ಮನೆಯೊಳಗಿನ ಭಾಷೆ ಯಾವುದಾದರೂ, ಹೊರಗಿನ ವ್ಯವಹಾರಿಕ ಭಾಷೆ ಕಡ್ಡಾಯವಾಗಿ ಕನ್ನಡವಾಗಿರಬೇಕು. ಇಲ್ಲಿನ ನೆಲ, ಜಲವನ್ನು ಬಳಸಿಕೊಳ್ಳುವ ಅಂತಾರಾಷ್ಟ್ರೀಯ ಕಂಪನಿಗಳೂ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂಬುದು ದೇಜಗೌ ಅವರ ಅಭಿಪ್ರಾಯವಾಗಿತ್ತು ಎಂದು ಸಿದ್ದರಾಮಯ್ಯ ನುಡಿದರು.
ಕುವೆಂಪು ಅವರ ನಾಡಗೀತೆ ಇಂದು ಭಾಷಾಂತರದಿಂದಾಗಿ ಇಡೀ ಜಗತ್ತಿಗೆ ಕನ್ನಡದ ದರ್ಶನ ಮಾಡಿಸಿದೆ. ರಾಮಾಯಣವನ್ನು ವಾಲ್ಮೀಕಿ ಒಬ್ಬರಷ್ಟೇ ಸೃಷ್ಟಿಸಲಿಲ್ಲ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯರು ರಾಮಾಯಣವನ್ನು ಸೃಷ್ಟಿಸಿದರು. ಮೂಲ ರಾಮಾಯಣದಲ್ಲಿ ಶೋಷಿತರಾಗಿದ್ದವರನ್ನು ಕುವೆಂಪು ತಮ್ಮ ರಾಮಾಯಣದಲ್ಲಿ ಪವಿತ್ರರನ್ನಾಗಿಸಿದರು. ಇದೇ ಕಾರಣಕ್ಕೆ ಕುವೆಂಪು ಜಗತ್ತಿಗೆ ಇಷ್ಟವಾಗುತ್ತಾರೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಥೆಗಾರ ಡಾ.ಕೆ.ಸತ್ಯ ನಾರಾಯಣ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠ ಡಾ.ಎ.ಎನ್.ಪ್ರಕಾಶ್‌ಗೌಡ, ಬಿಬಿಎಂಪಿ ಮುಖ್ಯ ಅಭಿಯಂತರ ಕೆ.ಟಿ.ನಾಗರಾಜ್,ಲೆಕ್ಕ ಪರಿಶೋಧಕ ರಾಘವೇಂದ್ರ ಪುರಾಣಿಕ್ ಸೇರಿ ಸಮಾಜ ಸೇವಕ ಗೋವಿಂದಳ್ಳಿ ಕೃಷ್ಣೇಗೌಡ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಾಶೇಖರ್, ಕವಿ ಟಿ.ಸತೀಶ್ ಜವರೇಗೌಡ, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖಿ ಮತ್ತಿತರರು ಉಪಸ್ಥಿತರಿದ್ದರು.







