ಗಂಗಮತಸ್ಥರನ್ನು ಎಸ್ಟಿಗೆ ಸೇರಿಸುವ ಪ್ರಯತ್ನ ನಡೆಯಲಿ: ಮೇಲ್ಮನೆ ಸದಸ್ಯ ಎನ್.ರವಿಕುಮಾರ್
ಬೆಂಗಳೂರು, ಸೆ.30: ಗಂಗಮತಸ್ಥರು ಪರಿಶಿಷ್ಟ ಪಂಗಡ(ಎಸ್ಟಿ)ದ ಜಾತಿಗೆ ಸೇರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಈ ಪ್ರಯತ್ನಕ್ಕೆ ಮುಂದೊಂದು ದಿನ ಫಲ ದೊರಕಲಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಶಯ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕೆಇಬಿ ಇಂಜಿನಿಯರ್ ಗಳ ಸಂಘದ ಸರ್ ಎಂ.ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ರಾಜ್ಯ ಗಂಗಾಮತ, ನೌಕರರ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗಂಗಾಮತ ನೌಕರರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗಂಗಮತಸ್ಥರನ್ನು ಎಸ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸಚಿವರುಗಳಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಅವರಿಗೆ ನವೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಒತ್ತಾಯಿಸುವಂತೆ ಮನವಿ ಮಾಡಿಕೊಳ್ಳಲಾಗುವುದು. ಹಾಗೂ ಈ ಜಾತಿಯ ಮುಖಂಡರು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಈಗಾಗಲೇ ಭೇಟಿಯಾಗಿ ಈ ವಿಚಾರದ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಈ ಪ್ರಯತ್ನಕ್ಕೆ ಫಲ ದೊರಕಲಿದೆ ಎಂದು ಆಸೆ ವ್ಯಕ್ತಪಡಿಸಿದರು.
ಅಂಬಿಗರ ಚೌಡಯ್ಯನವರು ಒಂದು ಸಾವಿರ ವಚನಗಳನ್ನು ರಚಿಸಿದ್ದು, ಅವುಗಳಲ್ಲಿ 399 ವಚನಗಳು ಲಭ್ಯವಾಗಿವೆ. ಹೀಗಾಗಿ, ಚೌಡಯ್ಯನಗರ ಬಗ್ಗೆ ಹಾಗೂ ವಚನಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಚಿಂತನೆ ಕೂಡ ನಡೆಯಬೆಕೆಂದು ಹೇಳಿದರು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೆ.ಶಿವಲಿಂಗಪ್ಪ ಮಾತನಾಡಿ, ದೇಶದ 13 ರಾಜ್ಯಗಳಲ್ಲಿ ಗಂಗಮಸ್ಥರು ಎಸ್ಸಿ, ಎಸ್ಟಿ ಪಂಗಡಕ್ಕೆ ಸೇರಿದ್ದಾರೆ. ಆದರೆ, ಕರ್ನಾಟಕದಲ್ಲಿ ಅತೀ ಹಿಂದುಳಿದ ಜನಾಂಗಕ್ಕೆ ಒಳಪಟ್ಟಿದ್ದರೂ ಎಸ್ಸಿ, ಎಸ್ಟಿಗೆ ಸೇರಿಸಲಾಗಿಲ್ಲ. ಇನ್ನು ಮುಂದೆಯಾದರೂ ಹೋರಾಟದ ಫಲವಾಗಿ ಗಂಗಮತಸ್ಥರು ಎಸ್ಟಿಗೆ ಸೇರಬಹುದೆಂದು ಆಸೆಯ ವ್ಯಕ್ತಪಡಿಸಿದರು. ನಮ್ಮ ಸಮುದಾಯದಲ್ಲಿ ಸಂವಹನದ ಕೊರತೆ ಬಹಳಷ್ಟಿದ್ದು, ಈ ಕೊರತೆ ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕೆಂದು ಹೇಳಿದರು. ಉಪಾಧ್ಯಕ್ಷ ಜಯ ಸಿ. ಕೋಟ್ಯಾನ ಮಾತನಾಡಿ, 12ನೆ ಶತಮಾನದ ಅನುಭವ ಮಂಟಪದಲ್ಲಿಯಿದ್ದ ಎಲ್ಲರಿಗೂ ಶರಣ, ಶರಣೆಯರು ಎನ್ನುತ್ತಾರೆ. ಆದರೆ, ಅಂಬಿಗರ ಚೌಡಯ್ಯನವರಿಗೆ ನಿಜಶರಣರು ಎಂದು ಕರೆಯುವುದು ವಿಶೇಷವಾಗಿದೆ. ಹೀಗಾಗಿ, ಈ ಸಮುದಾಯ ಜನರು ಕೀಳಹಿರಿಮೆಯನ್ನು ಬಿಟ್ಟು ಚೌಡಯ್ಯ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.
ಸಂಘದ ಗೌರಾವಾಧ್ಯಕ್ಷ ಕೆ.ಶಿವಲಿಂಗಪ್ಪ, ಖಜಾಂಚಿ ಡಾ.ಬಿ.ಲೋಕೇಶ್, ಕಾರ್ಯಾಧ್ಯಕ್ಷ ಶಿವರುದ್ರಪ್ಪ ಜಿ.ತಳವಾರ, ಎನ್.ಶ್ರೀನಿವಾಸಲು, ಪಿ.ಎನ್.ಪಾಪಣ್ಣ ಉಪಸ್ಥಿತರಿದ್ದರು.







