ನಾಗರಿಕ ಸೇವೆಗಳ ಮಂಡಳಿ ರಚನೆ ಅಗತ್ಯ: ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ
ಕೆ.ಜೈರಾಜ್ ಅವರ ‘ರಾಜಮಾರ್ಗ’ ಪುಸ್ತಕ ಲೋಕಾರ್ಪಣೆ

ಬೆಂಗಳೂರು, ಸೆ.30:ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ತಪ್ಪಿಸಲು ನಾಗರಿಕ ಸೇವೆಗಳ ಮಂಡಳಿ ರಚನೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ರವಿವಾರ ನಗರದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಏರ್ಪಡಿಸಿದ್ದ, ರಾಜ್ಯ ಸರಕಾರದ ವಿಶ್ರಾಂತ ಅಪರ ಮುಖ್ಯಕಾರ್ಯದರ್ಶಿ ಕೆ. ಜೈರಾಜ್ ಅವರ ಆಡಳಿತದ ಅನುಭವಗಳನ್ನು ಒಳಗೊಂಡ ‘ರಾಜಮಾರ್ಗ’ ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಅಡಗಿರುವುದು ದುರಂತ. ಇದೇ ಪರಿಸ್ಥಿತಿ ಮುಂದುವರಿದರೆ, ಆಡಳಿತ ವ್ಯವಸ್ಥೆ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ನಿಯಂತ್ರಣದಿಂದ ಈ ವರ್ಗಾವಣೆ ವ್ಯವಸ್ಥೆಯನ್ನು ಹೊರತರಬೇಕು. ಇದಕ್ಕಾಗಿ ನಾಗರಿಕ ಸೇವೆಗಳ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ನುಡಿದರು.
ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಕಾರಾತ್ಮಕ ವಿಚಾರಗಳಿಗೆ ಸಿಗುವ ಆಸಕ್ತಿ, ಸಕಾರಾತ್ಮಕ ಅಂಶಗಳಿಗೆ ಸಿಗುತ್ತಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ಕೇಳಿಬರುವುದು ಬರೀ ಟೀಕೆ-ಟಿಪ್ಪಣಿಗಳು. ಇಂತಹ ಸಂದರ್ಭದಲ್ಲಿ ಜೈರಾಜ್ ಅವರು ಆಡಳಿತದ ಒಳಗಡೆ ನಡೆಯುವ ಒಳ್ಳೆಯ ವಿಚಾರಗಳನ್ನು ‘ರಾಜಮಾರ್ಗ’ದಲ್ಲಿ ಉಲ್ಲೇಖಿಸುವ ಮೂಲಕ ಸಮತೋಲನ ತರುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇದೊಂದು ಆಡಳಿತ, ಸಮಾಜ ಮತ್ತು ಸರಕಾರವನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಇರುವವರಿಗೆ ಇದೊಂದು ಶಾಶ್ವತ ಕೊಡುಗೆ ಎಂದು ಬಣ್ಣಿಸಿದರು. ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಇಡೀ ಪುಸ್ತಕದಲ್ಲಿ 61 ಲೇಖನಗಳಿದ್ದು, ಆ ಪೈಕಿ 44 ಲೇಖನಗಳು ಆಡಳಿತಕ್ಕೆ ಸಂಬಂಧಿಸಿವೆ. ಪುಸ್ತಕದಲ್ಲಿ ಎಲ್ಲಿಯೂ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಯಾರ ಬಗ್ಗೆಯೂ ಕೊಂಕು, ವ್ಯಂಗ್ಯಗಳು ಇದರಲ್ಲಿ ಇಲ್ಲ. ಆದರ್ಶ ವ್ಯಕ್ತಿಗಳು ಸಾಮಾನ್ಯವಾಗಿ ಎತ್ತರದ ಮಾತುಗಳನ್ನಾಡುತ್ತಾರೆ. ಆದರೆ, ಅವು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಜೈರಾಜ್ ತಮ್ಮ ರಾಜಮಾರ್ಗದಲ್ಲಿ ಈ ತಪ್ಪು ಮಾಡಿಲ್ಲ ಎಂದರು. ಚಿತ್ರನಿರ್ದೇಶಕ ಟಿ.ಎನ್. ಸೀತಾರಾಂ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಟೀಕಿಸಬಹುದಾದ ಘಟನೆಗಳಿದ್ದರೂ ಅದಾವುದನ್ನೂ ಹೇಳದೆ, ಕೇವಲ ಸಕಾರಾತ್ಮಕ ಅಂಶಗಳನ್ನು ಸೂಚಿಸುವ ಮೂಲಕ ಜೈರಾಜ್ ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ, ಲೇಖಕ ಕೆ.ಜೈರಾಜ್ ಉಪಸ್ಥಿತರಿದ್ದರು.







