ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ: ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ

ಬೆಂಗಳೂರು, ಸೆ.30: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಅದರ ರಕ್ಷಣೆ ಅಗತ್ಯ. ಹಾಗಾಗಿ, ಯುವಕರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ತಿಳಿಸಿದ್ದಾರೆ.
ಇಲ್ಲಿನ ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ಫಿಎಫ್‌ಐ(ಕರಾವಳಿ) ಏರ್ಪಡಿಸಿದ್ದ, ‘ಈದ್ ಮಿಲನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಹಿಂಬಾಗಿಲ ಮೂಲಕ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗುತ್ತಿದೆ. ಮೂಲಭೂತ ಹಕ್ಕುಗಳ ದಮನ ಆಗುತ್ತಿದೆ. ಪತ್ರಿಕಾ ಸ್ವಾತಂತ್ರ ಅಪಾಯದಲ್ಲಿದೆ. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರಲು ದೇಶವನ್ನು ಗೌರವಿಸುವ ಹಾಗೂ ಭಾರತೀಯನಾಗಿ ಹೆಮ್ಮೆ ಪಡುವ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದು ನುಡಿದರು.
ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಆಶ್ರಫ್ ಜೋಕಟ್ಟೆ ಮಾತನಾಡಿ, ದೇಶದ ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಡಿಪಾಯಗಳಾಗಿರುವ ಪ್ರಜಾಪ್ರಭುತ್ವ, ಅಭಿವೃದ್ಧಿ ಹಾಗೂ ವೈವಿಧ್ಯತೆಗೆ ಅಪಾಯ ತಂದು ಭಾರತವನ್ನು ಒಂದು ಧರ್ಮದ ರಾಷ್ಟ್ರವನ್ನಾಗಿಸಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಪ್ರಬಲ ಪ್ರತಿರೋಧ ಒಡ್ಡುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಪಿಎಫ್‌ಐ ಕರಾವಳಿ ವಿಭಾಗದ ಅಧ್ಯಕ್ಷ ಸುಲ್ತಾನ್, ಪ್ರಧಾನ ಕಾರ್ಯದರ್ಶಿ ಹುಸೇನ್ ಹಾಝಿ, ಹಾರಿಸ್ ಸುನ್ನತ್ ಕೆರೆ, ನಾಸೀರ್ ಕೆಂಪಿ ಹಾಗೂ ರಿಝ್ವಾನ್ ವಳಾಲ್ ಉಪಸ್ಥಿತರಿದ್ದರು.







