ಬೆಂಗಳೂರು: ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಪೊಲೀಸರು
ಬೆಂಗಳೂರು, ಸೆ.30: ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗ ವ್ಯಾಪ್ತಿಯ ಐದು ಪೊಲೀಸ್ ಠಾಣಾ ವ್ಯಾಪ್ತಿಗಳ 146 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ವಿಚಾರಣೆ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸಿದ್ದಾರೆ.
ರವಿವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹಾಗೂ ಹೆಚ್ಚುವರಿ ಎಸ್.ಪಿ. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ 150ಕ್ಕೂ ಅಧಿಕ ಪೊಲೀಸರು ನೆಲಮಂಗಳ ಟೌನ್, ಗ್ರಾಮಾಂತರ, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು, ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳ 146 ರೌಡಿಗಳ ಮೇಲೆ ಮೇಲೆ ದಾಳಿ ನಡೆಸಿ ರೌಡಿಗಳನ್ನು ವಶಕ್ಕೆ ಪಡೆದು ಇಲ್ಲಿನ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಕರೆ ತಂದು ವಿಚಾರಣೆ ನಡೆಸಿದರು.
ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 30, ಗ್ರಾಮಾಂತರದ 33, ಮಾದನಾಯಕನಹಳ್ಳಿಯ 40, ತ್ಯಾಮ್ಲಗೊಂಡುವಿನ 21, ದಾಬಸ್‌ಪೇಟೆಯ 22 ರೌಡಿಗಳನ್ನು ಕರೆತರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾದನಾಯಕನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಖ್ಯಾತ ರೌಡಿ ರಾಮಾ ಯಾನೆ ಪಾಯಿಸನ್ ರಾಮ ವಿರುದ್ಧ 28 ಪ್ರಕರಣಗಳು ದಾಖಲಾಗಿದ್ದು, ಈತನನ್ನು ತೀವ್ರ ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ರೌಡಿ ಶೀಟರ್ ಬಂಡೆ ಮಂಜನ ವಿರುದ್ಧ 25 ಪ್ರಕರಣಗಳು ದಾಖಲಾಗಿದ್ದು, ಈತನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.







