ಹಜ್ ಕ್ಯಾಂಪಿನ 300 ಸ್ವಯಂ ಸೇವಕರನ್ನು ಉಮ್ರಾ ಯಾತ್ರೆಗೆ ಕಳುಹಿಸುತ್ತಿರುವ ಸಚಿವ ಝಮೀರ್: ಸಿದ್ದರಾಮಯ್ಯ

ಬೆಂಗಳೂರು, ಸೆ.30: ರಾಜ್ಯದ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸುವಂತಹ 700 ಸ್ವಯಂಸೇವಕರ ಪೈಕಿ 300 ಮಂದಿಯನ್ನು ಸಚಿವ ಝಮೀರ್ ಅಹ್ಮದ್ ಖಾನ್ ಉಮ್ರಾ ಯಾತ್ರೆಗೆ ಕಳುಹಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲಾಟರಿ ಎತ್ತುವ ಮೂಲಕ ಉಮ್ರಾ ಯಾತ್ರೆಗೆ ಸ್ವಯಂ ಸೇವಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಅವರು ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಮುಸ್ಲಿಮರಿಗೂ ಜೀವನದಲ್ಲಿ ಒಮ್ಮೆ ಪವಿತ್ರ ಮಕ್ಕಾ, ಮದೀನಾ ಯಾತ್ರೆ ಕೈಗೊಳ್ಳಬೇಕು ಎಂಬ ಆಸೆ ಇರುತ್ತದೆ. ಈ ಯಾತ್ರೆಗೆ ಕನಿಷ್ಟ 80 ಸಾವಿರ ರೂ.ಗಳಿಂದ 1 ಲಕ್ಷ ರೂ.ಖರ್ಚಾಗುತ್ತದೆ. ಬಡವರು ಇಷ್ಟು ಮೊತ್ತವನ್ನು ಪಾವತಿಸಲು ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ ಎಂದು ಅವರು ಹೇಳಿದರು.
ಇಂದು ಲಾಟರಿ ಮೂಲಕ ಆಯ್ಕೆಯಾಗಿರುವ ಸ್ವಯಂ ಸೇವಕರು ಜನವರಿ ಮೊದಲ ವಾರದಲ್ಲಿ ಉಮ್ರಾ ಯಾತ್ರೆ ಕೈಗೊಳ್ಳಲಿದ್ದಾರೆ. ಕಳೆದ ಬಾರಿ 200 ಮಂದಿಯನ್ನು ಕಳುಹಿಸಿದ್ದರು. ಈ ಬಾರಿ 300 ಮಂದಿಯನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಝಮೀರ್ ಅಹ್ಮದ್ ಮಾನವೀಯ ಗುಣವನ್ನು ಹೊಂದಿರುವ ವ್ಯಕ್ತಿ. ಬಡವರ ಕಷ್ಟಗಳಿಗೆ ಸ್ಪಂದಿಸಿ, ಅವರ ನಗುವಿನಲ್ಲಿ ತನ್ನ ನೆಮ್ಮದಿಯನ್ನು ಕಾಣುವ ಹೃದಯವಂತ. ಆದುದರಿಂದಲೇ, ಸಮ್ಮಿಶ್ರ ಸರ್ಕಾರದಲ್ಲಿ ಬಡವರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ಇರಬೇಕೆಂದು, ಅವರನ್ನು ಸಚಿವನನ್ನಾಗಿ ಮಾಡಿದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.
ಕುವೆಂಪು ನಮ್ಮ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದರು. ನಾವೆಲ್ಲರೂ ಪರಸ್ಪರ ಸಹೋದರರಂತೆ, ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಪ್ರೊ.ಮುಮ್ತಾಝ್ ಅಲಿಖಾನ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸರ್ದಾರ್, ಮೌಲಾನಾ ಮುಝಮ್ಮಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







