ಮೊದಲ ಜಯ ದಾಖಲಿಸಿದ ಕರ್ನಾಟಕ
ವಿಜಯ್ ಹಝಾರೆ ಟ್ರೋಫಿ: ಇತಿಹಾಸ ನಿರ್ಮಿಸಿದ ಬಿಹಾರ

ಆಲೂರ್, ಸೆ.30: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ವಿದರ್ಭ ವಿರುದ್ಧ ಕರ್ನಾಟಕ ತಂಡ 6 ವಿಕೆಟ್‌ಗಳ ಜಯ ಗಳಿಸಿದೆ.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 126 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ 32.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿತು. ಇದರೊಂದಿಗೆ ಕರ್ನಾಟಕ ತಂಡ ಮೊದಲ ಜಯ ಗಳಿಸಿದೆ. ಶ್ರೇಯಸ್ ಗೋಪಾಲ್ ಆಲ್‌ರೌಂಡ್ ಪ್ರದರ್ಶನ ನೀಡಿ ಕರ್ನಾಟಕದ ಗೆಲುವಿಗೆ ನೆರವಾದರು.ಮೀರ್ ಕೌನಿಯನ್ ಅಬ್ಬಾಸ್ ಔಟಾಗದೆ 35 ರನ್ ಮತ್ತು ಶ್ರೇಯಸ್ ಗೋಪಾಲ್ ಔಟಾಗದೆ 34 ರನ್ ಗಳಿಸಿದರು. ಯಶ್ ಠಾಕೂರ್(22ಕ್ಕೆ3) ದಾಳಿಗೆ ಸಿಲುಕಿ 17.1ಓವರ್‌ಗಳಲ್ಲಿ 61ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡದ ಪರ ಶ್ರೇಯಸ್ ಗೋಪಾಲ್ ಮತ್ತು ಮೀರ್ ಕೌನಿಯನ್ ಅಬ್ಬಾಸ್ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿ ತಂಡದ ಗೆಲುವಿಗೆ ನೆರವಾದರು.
ಅಭಿಷೇಕ್ ರೆಡ್ಡಿ 19 ರನ್, ನವೀನ್ ಎಂ.ಜಿ 23ರನ್, ರವಿಕುಮಾರ್ ಸಮರ್ಥ್ 9ರನ್, ಪವನ್ ದೇಶ್‌ಪಾಂಡೆ 4ರನ್ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ವಿದರ್ಭ ತಂಡ 36.2 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟಾಗಿತ್ತು. ಕರ್ನಾಟಕದ ಶ್ರೇಯಸ್ ಗೋಪಾಲ್(13ಕ್ಕೆ 3), ಕೃಷ್ಣಪ್ಪ ಗೌತಮ್ (34ಕ್ಕೆ 3), ವಿನಯ್ ಕುಮಾರ್(20ಕ್ಕೆ 2), ಅಭಿಮನ್ಯು ಮಿಥುನ್(24ಕ್ಕೆ 1) ಮತ್ತು ನವೀನ್ ಎಂ.ಜಿ(32ಕ್ಕೆ1) ಸಂಘಟಿತ ದಾಳಿಗೆ ಸಿಲುಕಿದ ವಿದರ್ಭ ತಂಡ ಬೇಗನೆ ಇನಿಂಗ್ಸ್ ಮುಗಿಸಿತು.
ನಾಯಕ ಗಣೇಶ್ ಸತೀಶ್ (50) ಗರಿಷ್ಠ ಸ್ಕೋರ್ ದಾಖಲಿಸಿದರು.ಅಥಾರ್ವ ತೈಡೆ (32) ಮತ್ತು ರಜನೀಶ್ ಗುರ್ಬಾನಿ(16) ಎರಡಂಕೆಯ ಸ್ಕೋರ್ ದಾಖಲಿಸಿದರು. ವಿದರ್ಭ ತಂಡ ಕೊನೆಯ 5 ವಿಕೆಟ್‌ಗಳನ್ನು 21 ರನ್‌ಗಳಿಗೆ ಕಳೆದುಕೊಂಡಿತು.
► ಭರ್ಜರಿ ಜಯ
ಆನಂದ್, ಸೆ.30: ಸಿಕ್ಕಿಂ ವಿರುದ್ಧ ವಿಜಯ್ ಹಝಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಬಿಹಾರ 292 ರನ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಆನಂದ್‌ನ ವಲ್ಲಭ್ ವಿದ್ಯಾನಗರದ ಶಾಸ್ತ್ರಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 339 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಸಿಕ್ಕಿಂ ತಂಡವನ್ನು 31 ಓವರ್‌ಗಳಲ್ಲಿ 46 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಬಿಹಾರ್ ಭರ್ಜರಿ ಜಯ ದಾಖಲಿಸಿದೆ.
ಬಿಹಾರದ ಬೌಲರ್‌ಗಳಾದ ನಾಯಕ ಕೇಶವ್ ಕುಮಾರ್(7ಕ್ಕೆ 3), ಅನುನೈ ಸಿಂಗ್(12ಕ್ಕೆ 3), ರೆಹಾನ್ ಖಾನ್ (10ಕ್ಕೆ2) ಮತ್ತು ಅಶುತೋಷ್ ಅಮನ್(7ಕ್ಕೆ 1) ದಾಳಿಯನ್ನು ಎದುರಿಸಲಾರದೆ ಸಿಕ್ಕಿಂ ದಾಂಡಿಗರು ಕನಿಷ್ಠ ಮೊತ್ತಕ್ಕೆ ಆಲೌಟಾದರು.
ಪದಮ್ ಲಿಂಬೊ (12) ಮತ್ತು ಬಿಬೆಕ್ ಡಾಯ್ಲಿ(10) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸುವಲ್ಲಿ ಯಶಸ್ವಿಯಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಿಹಾರ ತಂಡ ಮುಹಮ್ಮದ್ ರಹ್ಮತುಲ್ಲಾ (156) ಮತ್ತು ಬಬುಲ್ ಕುಮಾರ್(92) ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 338 ರನ್ ದಾಖಲಿಸಿತ್ತು.







