ದಕ್ಷಿಣ ಆಸ್ಟ್ರೇಲಿಯದ ಸೋಲಿನ ಸರಪಳಿ ಮುರಿದ ಫರ್ಗ್ಯುಸನ್ ಶತಕ

ಮೆಲ್ಬೊರ್ನ್, ಸೆ.30: ಇಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಕಲಮ್ ಫರ್ಗ್ಯುಸನ್ ಶತಕ ಬಾರಿಸುವ ಮೂಲಕ ವಿಕ್ಟೋರಿಯ ತಂಡದ ವಿರುದ್ಧ ದಕ್ಷಿಣ ಆಸ್ಟ್ರೇಲಿಯ ಎಂಟು ರನ್‌ಗಳಿಂದ ಜಯಗಳಿಸುವ ಜೊತೆಗೆ ಸತತ ಮೂರು ಪಂದ್ಯಗಳ ಸೋಲಿನ ನಂತರ ಗೆಲುವಿನ ಮುಖ ಕಾಣಲು ನೆರವಾಗಿದ್ದಾರೆ. ದ. ಆಸ್ಟ್ರೇಲಿಯ ಪರ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಫರ್ಗ್ಯುಸನ್‌ರ 133 ರನ್‌ಗಳ ನೆರವಿನಿಂದ ತಂಡವು 265 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
ಸವಾಲು ಎದುರಿಸಲು ಮೈದಾನಕ್ಕಿಳಿದ ವಿಕ್ಟೋರಿಯ ತಂಡದ ಪ್ರಮುಖ ಆಟಗಾರರು ಎದುರಾಳಿ ತಂಡದ ಬೌಲರ್‌ಗಳಾದ ಜೋ ಮೆನ್ನಿ ಮತ್ತು ಆ್ಯಡಮ್ ಝಂಪಾ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿದ ನಂತರ ತಂಡ 257 ರನ್‌ಗಳನ್ನಷ್ಟೇ ಪೇರಿಸಲು ಶಕ್ತವಾಗಿ ಎಂಟು ರನ್‌ಗಳಿಂದ ಸೋಲೊಪ್ಪಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್‌ಗಿಳಿದ ದ.ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರರು ಒಂಬತ್ತು ಓವರ್ ಕೊನೆಯಾಗುವಾಗ ಪೆವಿಲಿಯನ್ ತೆರಳಿ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಫರ್ಗ್ಯುಸನ್ ಕ್ರೀಸ್ ಕಚ್ಚಿ ಆಡಿ ತಂಡವನ್ನು ಆಧರಿಸಿದರು. ಇವರು ಜೇಕ್ ಲೆಹ್ಮನ್ (44) ಮತ್ತು ಟಾಮ್ ಕೂಪರ್ (37) ಜೊತೆ ಎರಡು ಅಮೂಲ್ಯ ಜೊತೆಗಾರಿಕೆಯನ್ನು ನೀಡಿದರು. ಕೇವಲ 55 ಎಸೆತಗಳಲ್ಲಿ ಫರ್ಗ್ಯುಸನ್‌ತಮ್ಮ ಅರ್ಧಶತಕ ಪೂರೈಸಿದರು. ಮತ್ತೊಂದು ಬದಿಯಲ್ಲಿ ನಾಯಕ ಲೆಹ್ಮನ್ ನಿಧಾನ ಗತಿಯಲ್ಲಿ ಆಡಿ ಅರ್ಧಶತಕ ದಾಖಲಿಸುವತ್ತ ದಾಪುಗಾಲು ಹಾಕಿದರೂ ರನೌಟ್ ಆಗಿ ಅವಕಾಶ ಕಳೆದುಕೊಂಡರು. ನಂತರ ಕೂಪರ್ ಜೊತೆ ಸೇರಿ ಇನ್ನಿಂಗ್ಸ್ ಮುಂದುವರಿಸಿದ ಫರ್ಗ್ಯುಸನ್ 107 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲಿಂದ ತನ್ನ ಆಟದ ಗತಿಯನ್ನು ಬದಲಿಸಿದ ಫರ್ಗ್ಯುಸನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಒಂದು ಹಂತದಲ್ಲಿ ಫರ್ಗ್ಯುಸನ್ ಮತ್ತು ಕೂಪರ್ ಜೋಡಿ ಆರಾಮವಾಗಿ ಎದುರಾಳಿ ಬೌಲರ್‌ಗಳ ಎಸೆತಗಳನ್ನು ಬೌಂಡರಿಗಟ್ಟಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆ ನೀಡಿದರು.
ಆದರೆ ಬೌಲರ್ ಫವಾದ್ ಅಹ್ಮದ್ ತಮ್ಮ ಒಂದೇ ಓವರ್‌ನಲ್ಲಿ ಇಬ್ಬರು ದಾಂಡಿಗರನ್ನೂ ಸ್ಪಿನ್ ಖೆಡ್ಡಾಕ್ಕೆ ಬೀಳಿಸುವ ಮೂಲಕ ದ.ಆಸ್ಟ್ರೇಲಿಯದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕೊನೆಯಲ್ಲಿ ಬಾಲಂಗೋಚಿ ಆಟಗಾರರು ತಮ್ಮಿಂದಾದ ಕಾಣಿಕೆ ನೀಡಿ ತಂಡ ನಿಗದಿತ 50 ಓವರ್‌ಗಳಲ್ಲಿ 265 ರನ್ ಕಲೆ ಹಾಕುವಂತೆ ನೋಡಿಕೊಂಡರು. ಸವಾಲನ್ನು ಬೆನ್ನುಹತ್ತಿ ಕ್ರೀಸ್‌ಗಿಳಿದ ವಿಕ್ಟೋರಿಯ ತಂಡದ ಆರಂಭವೂ ಕಳಪೆಯಾಗಿತ್ತು. ಹನ್ನೊಂದು ಓವರ್ ಮುಗಿಯುವ ವೇಳೆಗೆ ತಂಡದ ಅಗ್ರ ಇಬ್ಬರು ಬ್ಯಾಟ್ಸ್‌ಮ್ಯಾನ್‌ಗಳು ಜೋ ಮೆನ್ನಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ನಾಲ್ಕನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟ ನೀಡಿದ ಅನುಭವಿ ಕ್ಯಾಮರೂನ್ ವೈಟ್ (81) ಮತ್ತು ಪೀಟರ್ ಹ್ಯಾಂಡ್ಸ್ ಕೋಂಬ್ (64) ತಂಡವನ್ನು ಆಧರಿಸಿದರು. 178ಕ್ಕೆ 2 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸುವ ದಾರಿಯಲ್ಲಿದ್ದ ವಿಕ್ಟೋರಿಯ ತಂಡದ ಮಧ್ಯಮ ಕ್ರಮಾಂಕ ಏಕಾಏಕಿ ಕುಸಿತ ಕಂಡು 219 ರನ್ ತಲುಪುವ ವೇಳೆಗೆ 7 ವಿಕೆಟ್ ಕಳೆದುಕೊಂಡಿತ್ತು. ಇನ್ನಿಂಗ್ಸ್‌ನ ಮೂರನೇ ವಿಕೆಟ್ ಪಡೆದ ಮೆನ್ನಿ, ಹ್ಯಾಂಡ್ಸ್ ಕೋಂಬ್ ವಿಕೆಟ್ ಕಬಳಿಸುವ ಮೂಲಕ ವಿಕ್ಟೋರಿಯ ಪತನ ಆರಂಭವಾಯಿತು.
ಶತಕದ ಸನಿಹದಲ್ಲಿದ್ದ ವೈಟ್ ಮುಂದಿನ ಓವರ್‌ನಲ್ಲಿ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಝಂಪಾ ಎಸೆದ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಕಬಳಿಸುವ ಮೂಲಕ ವಿಕ್ಟೋರಿಯದ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಅಂತಿಮ ಹಂತದಲ್ಲಿ ವಿಕ್ಟೋರಿಯ ಗೆಲುವಿಗೆ ಎರಡು ಓವರ್‌ಗಳಲ್ಲಿ 26 ರನ್‌ಗಳ ಆವಶ್ಯಕತೆಯಿತ್ತು. ಈ ವೇಳೆ ಫವಾದ್ ಬಾರಿಸಿದ ಎರಡು ಬೌಂಡರಿಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ.







