ರೋಹಿತ್ ಶರ್ಮಾ ನಂ.2; ರಶೀದ್ ಖಾನ್ ನಂ. 1 ಆಲ್‌ರೌಂಡರ್

ದುಬೈ, ಸೆ.30: ಏಶ್ಯಕಪ್‌ನಲ್ಲಿ ಏಳನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸಿದ್ದ ಅಗ್ರ ಸರದಿಯ ದಾಂಡಿಗ ರೋಹಿತ್ ಶರ್ಮಾ ಟೂರ್ನಮೆಂಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ಈ ಪ್ರದರ್ಶನ ಐಸಿಸಿ ಏಕದಿನ ಬ್ಯಾಟ್ಸ್ ಮನ್ ರ್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ನಂ.2 ಸ್ಥಾನಕ್ಕೇರಲು ನೆರವಾಗಿದೆ.
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ (842) ನಂ.1 ಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ 1 ಪಾಯಿಂಟ್ ಹಿಂದಿದ್ದಾರೆ.
ಏಶ್ಯಕಪ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಆಟಗಾರ ಪೈಕಿ ಮೊದಲ ಸ್ಥಾನದಲ್ಲಿದ್ದ ರೋಹಿತ್ ಶರ್ಮಾರ ಆರಂಭಿಕ ಜೊತೆಗಾರ ಶಿಖರ್ ಧವನ್ ರ್ಯಾಂಕಿಂಗ್‌ನಲ್ಲಿ ನಂ.5ನೇ ಸ್ಥಾನ ಪಡೆದಿದ್ದಾರೆ.
ಅಫ್ಘಾನಿಸ್ತಾನದ ಆಲ್‌ರೌಂಡರ್ ರಶೀದ್ ಏಶ್ಯ ಕಪ್‌ನಲ್ಲಿ 10 ವಿಕೆಟ್ ಉಡಾಯಿಸಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಮೊದಲ ಸ್ಥಾನ ಪಡೆದಿದ್ದರು. ಅವರು 87 ರನ್ ದಾಖಲಿಸಿದ್ದಾರೆ. ಈ ಕಾರಣದಿಂದಾಗಿ ಆಲ್‌ರೌಂಡರ್‌ಗಳ ಪೈಕಿ ರಶೀದ್ ಖಾನ್ ನಂ.1 ಸ್ಥಾನಕ್ಕೆ ಏರಿದ್ದಾರೆ.
ಬಾಂಗ್ಲಾದ ಶಾಕೀಬ್ ಅಲ್ ಹಸನ್‌ರನ್ನು ರಶೀದ್ ಖಾನ್ ಹಿಂದಕ್ಕೆ ತಳ್ಳಿದ್ದಾರೆ. ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರರ ಪೈಕಿ ನಂ.1ಸ್ಥಾನಕ್ಕೇರಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಏಶ್ಯಕಪ್‌ನಲ್ಲಿ 8 ವಿಕೆಟ್ ಪಡೆದಿದ್ದರು. ಅವರು ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಕುಲ್‌ದೀಪ್ ಯಾದವ್ (ನಂ.3) ಮೊದಲ ಬಾರಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಏಶ್ಯಕಪ್‌ನಲ್ಲಿ 6 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್ ಪಡೆದಿದ್ದರು.







