ಎದೆಯುರಿಯೇ...? ಈ ಸರಳ ಉಪಾಯಗಳನ್ನು ಮಾಡಿ ನೋಡಿ......
ಇದೊಂದು ಸಾಮಾನ್ಯ ಜೀರ್ಣ ಸಂಬಂಧಿ ಸಮಸ್ಯೆಯಾಗಿದ್ದು,ಎದೆಯ ಭಾಗದಲ್ಲಿ ಉರಿಯುತ್ತಿರುವ ಅನುಭವವನ್ನುಂಟು ಮಾಡುತ್ತದೆ. ಇದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತಿದ್ದು,ಜಠರಾಮ್ಲವು ಅನ್ನನಾಳದಲ್ಲಿ ತಳ್ಳಲ್ಪಟ್ಟಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಜಠರ ಹಿಮ್ಮುಖ ರೋಗ(ಜಿಇಆರ್ಡಿ)ದ ಸಾಮಾನ್ಯ ಲಕ್ಷಣವಾಗಿದ್ದು,ಭಾರತದಲ್ಲಿ ಶೇ.7.6ರಿಂದ ಶೇ.18.7ರಷ್ಟು ಜನರು ಈ ರೋಗದಿಂದ ಬಳುತ್ತಿರುತ್ತಾರೆ.
ನಿದ್ರಾಹೀನತೆ,ಸೂಕ್ತವಲ್ಲದ ಆಹಾರ ಸೇವನೆ,ಧೂಮ್ರಪಾನ ಅಥವಾ ಸೋಂಕು.... ಹೀಗೆ ಎದೆಯುರಿಯನ್ನುಂಟು ಮಾಡುವ ಹಲವಾರು ಕಾರಣಗಳಿವೆ. ಕೆಲವು ಸರಳ ಉಪಾಯಗಳನ್ನು ಅನುಸರಿಸುವ ಮೂಲಕ ಎದೆಯುರಿಯಿಂದ ಶಮನ ಪಡೆಯಬಹುದು ಮತ್ತು ಇತರ ಜೀರ್ಣಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು.
► ಆಗಾಗ್ಗೆ ಸಣ್ಣ ಊಟ ಮಾಡಿ
ಒಂದೇ ಬಾರಿಗೆ ಭರ್ತಿ ಊಟ ಮಾಡುವುದರ ಬದಲು ಆಗಾಗ್ಗೆ ಸಣ್ಣ ಸಣ್ಣ ಊಟಗಳನ್ನು ಮಾಡುವುದು ಎದೆಯುರಿಯ ಅಪಾಯವನ್ನು ತಗ್ಗಿಸಲು ಸರಳ ಉಪಾಯಗಳಲ್ಲೊಂದಾಗಿದೆ. ಒಂದೇ ಬಾರಿಗೆ ಅತಿಯಾದ ಊಟವನ್ನು ಮಾಡುವುದರಿಂದ ಅದು ಅನ್ನನಾಳದಲ್ಲಿ ಜಠರಾಮ್ಲದ ಹಿಮ್ಮುಖ ಹರಿವನ್ನು ತಡೆಯುವ ಈಸೊಫೇಗಲ್ ಸ್ಫಿಂಕ್ಟರ್ (ಎಲ್ಇಎಸ್) ಅಥವಾ ಕವಾಟದಂತಿರುವ ಕೆಳ ಅನ್ನನಾಳ ಸಂಕೋಚಕ ಸ್ನಾಯುವಿನ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ.
► ಕಡಿಮೆ ಕಾರ್ಬೊಹೈಡ್ರೇಟ್ಗಳಿರುವ ಆಹಾರ ಸೇವಿಸಿ
ಕಡಿಮೆ ಕಾರ್ಬೊಹೈಡ್ರೇಟ್ಗಳನ್ನೊಳಗೊಂಡಿರುವ ಆಹಾರಗಳು ಬೊಜ್ಜುದೇಹಿಗಳಲ್ಲಿ ಎದೆಯುರಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಅಧಿಕ ಕಾರ್ಬೊಹೈಡ್ರೇಟ್ಗಳು ಹೊಟ್ಟೆಯೊಳಗೆ ವಾಯುವುಂಟಾಗಲು ಕಾರಣವಾಗುತ್ತವೆ ಮತ್ತು ಹೊಟ್ಟೆ ಉಬ್ಬರಿಸುವಂತೆ ಮಾಡುತ್ತವೆ. ಇದು ಎದೆಯುರಿಗೆ ಕಾರಣವಾಗುತ್ತದೆ.
► ಆಹಾರವನ್ನು ಚೆನ್ನಾಗಿ ಅಗಿಯಿರಿ
ಆಹಾರವನ್ನು ನಿಧಾನವಾಗಿ,ಚೆನ್ನಾಗಿ ಅಗಿದು ಸೇವಿಸುವುದರಿಂದ ಆಹಾರವನ್ನು ವಿಭಜಿಸಲು ಮತ್ತು ಪಚನಗೊಳಿಸಲು ಜೀರ್ಣರಸಗಳಿಗೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ಆದರೆ ಅವಸರದಿಂದ ಊಟ ಮಾಡಿದಾಗ ಅದು ಸರಿಯಾಗಿ ಜೀರ್ಣಗೊಳ್ಳುವುದಿಲ್ಲ. ಇದು ಅಜೀರ್ಣ,ಆಮ್ಲೀಯತೆ ಮತ್ತು ಎದೆಯುರಿಗೆ ಕಾರಣವಾಗುತ್ತದೆ.
► ತಡರಾತ್ರಿ ಊಟ ಮಾಡುವುದನ್ನು ನಿವಾರಿಸಿ
ಅನಿಯಮಿತ ಊಟದ ಅಭ್ಯಾಸ ಜೀರ್ಣ ಸಂಬಂಧಿತ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಕೆಲಸದ ಒತ್ತಡ ಅಥವಾ ಸಂಜೆ ವೇಳೆ ಅತಿಯಾಗಿ ತಿನಿಸುಗಳನ್ನು ಸೇವಿಸುವುದು ರಾತ್ರಿ ತಡವಾಗಿ ಊಟ ಮಾಡಲು ಕಾರಣವಾಗುತ್ತದೆ ಮತ್ತು ಇದು ಎದೆಉರಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ತಡರಾತ್ರಿ ಅಥವಾ ಮಲಗುವುದಕ್ಕೆ ಸ್ವಲ್ಪವೇ ಮುನ್ನ ಊಟ ಮಾಡುವ ಅಭ್ಯಾಸವಿದ್ದರೆ ಅದನ್ನು ಕೈಬಿಡಿ.
► ಹಸಿ ಈರುಳ್ಳಿಯಿಂದ ದೂರವಿರಿ
ಹೆಚ್ಚಿನವರು ಊಟದೊಂದಿಗೆ ಅಥವಾ ಸಲಾಡ್ನಲ್ಲಿ ಹಸಿ ಈರುಳ್ಳಿಯನ್ನು ಸೇರಿಸಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದು ಎದೆಯುರಿ ಮತ್ತು ತೇಗನ್ನು ಹೆಚ್ಚಿಸುತ್ತದೆ. ಹಸಿ ಈರುಳ್ಳಿ ಹುದುಗು ಬರಿಸುವ ನಾರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು,ಇದು ಜೀರ್ಣದ ವೇಳೆ ಹೆಚ್ಚಿನ ವಾಯುವನ್ನು ಉತ್ಪಾದಿಸುತ್ತದೆ. ಅಲ್ಲದೆ ಹಸಿ ಈರುಳ್ಳಿಯಲ್ಲಿರುವ ಸಂಯುಕ್ತಗಳು ಅನ್ನನಾಳದ ಒಳಪದರಗಳನ್ನು ಕೆರಳಿಸುವ ಮೂಲಕ ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡುತ್ತವೆ.
► ಇಂಗಾಲೀಕೃತ ಪಾನೀಯಗಳನ್ನು ವರ್ಜಿಸಿ
ಇಂಗಾಲೀಕೃತ ಪಾನೀಯಗಳು ಎಲ್ಇಎಸ್ ಅನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತವೆ ಮತ್ತು ಆಮ್ಲ ಹಿಮ್ಮುಖ ಹರಿವಿನಿಂದಾಗಿ ತೇಗುಗಳನ್ನು ಹೆಚ್ಚಿಸುತ್ತವೆ. ಈ ಪಾನೀಯಗಳಲ್ಲಿರುವ ಕಾರ್ಬನ್ ಡಯಾಕ್ಸೈಡ್ ಅನ್ನನಾಳವನ್ನು ಪ್ರವೇಶಿಸುವ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ.
► ಚ್ಯೂಯಿಂಗ್ ಗಮ್ ಅಗಿಯಿರಿ
ಸಕ್ಕರೆರಹಿತ ಚ್ಯೂಯಿಂಗ್ ಗಮ್ ಅಗಿಯುವುರಿಂದ ಆಮ್ಲೀಯತೆಯನ್ನು ಎದುರಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಚ್ಯೂಯಿಂಗ್ ಗಮ್ ಅಗಿಯುವದರಿಂದ ಜೊಲ್ಲಿನ ಉತ್ಪತ್ತಿಯು ಹೆಚ್ಚುತ್ತದೆ ಮತ್ತು ಇದು ಅನ್ನನಾಳದಲ್ಲಿಯ ಹೆಚ್ಚುವರಿ ಆ್ಯಸಿಡ್ನ್ನು ನಿವಾರಿಸಲು ನೆರವಾಗುತ್ತದೆ.
► ಕಾಫಿ ಸೇವನೆಗೆ ಮಿತಿಯಿರಲಿ
ಆಮ್ಲ ಹಿಮ್ಮುಖ ಹರಿವನ್ನುಂಟು ಮಾಡುವ ಆಹಾರಗಳಿಂದ ದೂರವಿರುವುದು ಎದೆಯುರಿಯನ್ನು ತಡೆಯುವ ಪ್ರಮುಖ ವಿಧಾನಗಳಲ್ಲೊಂದಾಗಿದೆ ಮತ್ತು ಕಾಫಿಯೂ ಇವುಗಳಲ್ಲಿ ಸೇರಿದೆ. ಕಾಫಿಯು ಎಲ್ಇಎಸ್ ಅನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನುಂಟು ಮಾಡುತ್ತದೆ ಎನ್ನಲಾಗಿದೆ.
► ಮದ್ಯಪಾನ ಬೇಡ
ಮದ್ಯಪಾನ ಆರೋಗ್ಯಕ್ಕೆ ಕೆಟ್ಟದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಮತ್ತು ನೀವು ಎದೆಯುರಿಯಿಂದ ಬಳಲುತ್ತಿದ್ದರೆ ಅದು ಇನ್ನೂ ಕೆಟ್ಟದ್ದಾಗಿದೆ. ಮದ್ಯಪಾನವು ಆಮ್ಲ ಹಿಮ್ಮುಖ ಹರಿವನ್ನು ಹೆಚ್ಚಿಸುವ ಜೊತೆಗೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅದು ಜಠರಾಮ್ಲಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಮ್ಲಗಳನ್ನು ನಿವಾರಿಸುವ ಎಲ್ಇಎಸ್ನ ಸಾಮರ್ಥ್ಯವನ್ನು ಕುಂದಿಸುತ್ತದೆ.
► ಊಟವಾದ ತಕ್ಷಣ ವ್ಯಾಯಾಮ ಬೇಡ
ವ್ಯಾಯಾಮವು ಜೀರ್ಣಕ್ರಿಯೆಗೆ ನೆರವಾಗುತ್ತದೆ ನಿಜ,ಆದರೆ ಊಟವಾದ ತಕ್ಷಣ ವ್ಯಾಯಾಮ ಮಾಡುವುದು ತಪ್ಪು. ಅದರಿಂದ ಜೀರ್ಣಕ್ರಿಯೆಗೆ ಅಡ್ಡಿಯುಂಟಾಗುತ್ತದೆ ಮತ್ತು ಅನ್ನನಾಳದಲ್ಲಿ ಆಮ್ಲ ಶೇಖರಣೆಗೆ ಕಾರಣವಾಗುತ್ತದೆ ಇದು ಎದೆಯುರಿಗೆ ಕಾರಣವಾಗುತ್ತದೆ ಮತ್ತು ನೀವು ಈಗಾಗಲೇ ಎದೆಯುರಿಯಿಂದ ಬಳಲುತ್ತಿದ್ದರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ವ್ಯಾಯಾಮ ಮಾಡುವ ಮುನ್ನ ನಿಮ್ಮ ಜಠರವು ಸ್ವಲ್ಪ ಖಾಲಿಯಾಗಲು ಸಮಯಾವಕಾಶ ನೀಡಿ.
► ಊಟವಾದ ತಕ್ಷಣ ಮಲಗಬೇಡಿ
ಊಟ ಮತ್ತು ನಿದ್ರೆಗೆ ತೆರಳುವುದರ ಮಧ್ಯೆ ಕನಿಷ್ಠ ಮೂರು ಗಂಟೆಗಳ ಅಂತರವನ್ನು ಕಾಯ್ದುಕೊಳ್ಳುವುದು ತುಂಬ ಮುಖ್ಯವಾಗಿದೆ. ಊಟವಾದ ತಕ್ಷಣ ಮಲಗಿದರೆ ಅದು ಎಲ್ಇಎಸ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿಗೆ ಕಾರಣವಾಗುತ್ತದೆ. ಊಟ ಮತ್ತು ನಿದ್ರೆಯ ನಡುವೆ ಸಾಕಷ್ಟು ಸಮಯವಿದ್ದರೆ ಜಠರವು ಆಹಾರವನ್ನು ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಎದೆಯುರಿಯನ್ನು ತಡೆಯುತ್ತದೆ.
► ಹಾಸಿಗೆಯ ತಲೆಭಾಗ ಎತ್ತರವಾಗಿರಲಿ
ವಿಶೇಷವಾಗಿ ರಾತ್ರಿಯ ವೇಳೆ ಎದೆಯುರಿ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ನಿಮ್ಮ ಹಾಸಿಗೆಯ ಭಂಗಿ ಕಾರಣವಾಗಿರಬುದು. ಹಾಸಿಗೆಯು ತಲೆಭಾಗದಲ್ಲಿ ಎತ್ತರವಾಗಿದ್ದರೆ ಅದು ಜಠರಾಮ್ಲವನ್ನು ನಿವಾರಿಸುವಲ್ಲಿ ನೆರವಾಗುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿನ ಸಂದರ್ಭಗಳನ್ನು ತಗ್ಗಿಸುತ್ತದೆ
► ಬಲಮಗ್ಗುಲಲ್ಲಿ ಮಲಗಬೇಡಿ
ಎಡಮಗ್ಗುಲಲ್ಲಿ ಮಲಗುವುದರಿಂದ ಒಳ್ಳೆಯ ನಿದ್ರೆಯೂ ಬರುತ್ತದೆ ಮತ್ತು ಎದೆಯುರಿಯನ್ನೂ ತಡೆಯುತ್ತದೆ. ಬಲಮಗ್ಗುಲಾಗಿ ಮಲಗಿದರೆ ಆಮ್ಲ ಹಿಮ್ಮುಖ ಹರಿವಿನ ಸಾಧ್ಯತೆ ಹೆಚ್ಚುತ್ತದೆ. ಬಲಮಗ್ಗುಲಾಗಿ ಮಲಗಿದಾಗ ಎಲ್ಇಎಸ್ ಮೂಲಕ ಆಮ್ಲಸೋರಿಕೆಯ ಸಾಧ್ಯತೆಯು ಹೆಚ್ಚಿದ್ದು,ಇದು ಎದೆಯುರಿಯ ಅಪಾಯವನ್ನು ಹೆಚ್ಚಿಸುತ್ತದೆ.
► ದೇಹತೂಕವನ್ನು ಇಳಿಸಲು ಪ್ರಯತ್ನಿಸಿ
ನೀವು ಅತಿಯಾದ ದೇಹತೂಕವನ್ನು ಹೊಂದಿದ್ದರೆ ಮತ್ತು ಆಮ್ಲ ಹಿಮ್ಮುಖ ಹರಿವು ನಿಮ್ಮನ್ನು ಕಾಡುತ್ತಿದ್ದರೆ ತೂಕವನ್ನು ಇಳಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ಏಕೆಂದರೆ ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿರುವ ಹೆಚ್ಚುವರಿ ಕೊಬ್ಬು ಜಠರ ಮತ್ತು ಎಲ್ಇಎಸ್ ಮೇಲೆ ಒತ್ತಡವನ್ನು ಹೇರುತ್ತದೆ. ಇದರಿಂದ ಜಠರಾಮ್ಲವು ಮೇಲ್ಮುಖವಾಗಿ ತಳ್ಳಲ್ಪಡುತ್ತದೆ ಮತ್ತು ಇದು ಎದೆಯುರಿಗೆ ಕಾರಣವಾಗುತ್ತದೆ. ಕೆಲವು ಔಷಧಿಗಳೂ ಅನ್ನನಾಳದಲ್ಲಿ ಆಮ್ಲ ಶೇಖರಣೆ ಮತ್ತು ಊರಿಯೂತಕ್ಕೆ ಕಾರಣವಾಗುತ್ತವೆ ಮತ್ತು ಎದೆಯುರಿಯನ್ನುಂಟು ಮಾಡುತ್ತವೆ. ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ ಮತ್ತು ಎದೆಯುರಿಯನ್ನು ಅನುಭವಿಸುತ್ತಿದ್ದರೆ ಅದು ಔಷಧಿಯ ಅಡ್ಡಪರಿಣಾಮವೇ ಎನ್ನುವುದನ್ನು ತಿಳಿದುಕೊಳ್ಳಲು ನಿಮ್ಮ ವೈದ್ಯರನ್ನು ಭೇಟಿಯಾಗಿ ಪರಿಹಾರವನ್ನು ಪಡೆಯಬಹುದಾಗಿದೆ.