ಬಂಡೀಪುರ ಉದ್ಯಾನವನದಲ್ಲಿ ಸಫಾರಿ ವಾಹನಗಳ ಮೇಲೆ ಕಾಡಾನೆ ದಾಳಿ

ಚಾಮರಾಜನಗರ,ಅ.1: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸಫಾರಿಗೆ ತೆರಳಿದ ಪ್ರವಾಸಿಗರ ವಾಹನಗಳ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ನಡೆದಿದ್ದು, ಸಫಾರಿ ವಾಹನ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೆಚ್ಚಿನ ಪ್ರಾಣಿಗಳು ನೆಲೆಯೂರಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ವೀಕೆಂಡ್ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದು, ಬರುವ ಪ್ರವಾಸಿಗರು ಬಂಡೀಪುರ ಅಭಯಾರಣ್ಯದೊಳಗೆ ಸಫಾರಿಗೆ ತೆರಳಿ ಕಾಡು ಪ್ರಾಣಿಗಳನ್ನು ಕಂಡು ಕಣ್ತುಂಬಿಸಿಕೊಳ್ಳುವ ಸಮಯದಲ್ಲಿ ಕಾಡಾನೆಗಳು ಹಠಾತ್ ದಾಳಿ ನಡೆಸುತ್ತಿದೆ. ಹದಿನೈದು ದಿನಗಳ ಅಂತರದಲ್ಲಿ ಎರಡು ಭಾರಿ ಕಾಡಾನೆ ಸಫಾರಿ ವಾಹನಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಬಂಡೀಪುರ ಅಭಯಾರಣ್ಯದೊಳಗಿನ ಸಫಾರಿ ಮಾರ್ಗದಲ್ಲಿ ಸಂಚಾರ ಮಾಡುವ ಜಿಪ್ಸಿಗಳು ತೆರೆದ್ದಾಗಿದ್ದು, ಇದರಿಂದಾಗಿ ಕಾಡು ಪ್ರಾಣಿಗಳು ಸಫಾರಿ ವಾಹನಗಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ.





