ಬೆಂಗಳೂರು: ನಗರದಲ್ಲಿ ಎರಡು ಕೋಟಿ ಮೀರಿದ ವಾಹನಗಳ ಸಂಖ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.1: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾರಿಗೆ ಇಲಾಖೆಯ ವರದಿ ಪ್ರಕಾರ ಎರಡು ಕೋಟಿಗೂ ಅಧಿಕ ವಾಹನಗಳು ನೋಂದಣಿಯಾಗಿವೆ.
ಇಲಾಖೆ ನೀಡಿರುವ ವರದಿ ಪ್ರಕಾರ ಜು.31 ರ ವೇಳೆಗೆ ರಾಜ್ಯದಲ್ಲಿದ್ದ 1.99 ಕೋಟಿ ವಾಹನಗಳು ಈಗ ಎರಡು ಕೋಟಿಗೂ ಅಧಿಕವಾಗಿವೆ. ಕಳೆದ 7 ವರ್ಷಗಳಿಂದ ವಾಹನಗಳ ಸಂಖ್ಯೆಯಲ್ಲಿ 100ರಷ್ಟು ಏರಿಕೆಯಾಗಿದ್ದು, ಪ್ರತಿ ವರ್ಷ 8 ರಿಂದ 10 ರಷ್ಟು ಏರಿಕೆಯಾಗುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯಕ್ಕೆ 2 ಕೋಟಿಗೆ ಮುಟ್ಟಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) 10 ವಲಯಗಳನ್ನು ಹೊಂದಿದ್ದು, 76.2 ಲಕ್ಷ ವಾಹನಗಳಿವೆ. ಹೀಗಾಗಿ, ಬೆಂಗಳೂರು ನಂಬರ್ 1 ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ವಲಯದಲ್ಲಿ(ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ) 22 ಲಕ್ಷ ವಾಹನಗಳಿದ್ದು 4ನೆ ಸ್ಥಾನದಲ್ಲಿದೆ.
ಇನ್ನುಳಿದಂತೆ ಬೆಳಗಾವಿ ಸಾರಿಗೆ ವಲಯದಲ್ಲಿ (ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ) 35.7 ಲಕ್ಷ, ಶಿವಮೊಗ್ಗ (ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು) ವಿಭಾಗದಲ್ಲಿ 29.9 ಲಕ್ಷ ವಾಹನಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಕಲಬುರ್ಗಿ(ಕಲ್ಬುರ್ಗಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್ ಹಾಗೂ ಯಾದಗಿರಿ) ವಲಯದಲ್ಲಿ 19.3 ಲಕ್ಷ ವಾಹನಗಳು ಹಾಗೂ ಬೆಂಗಳೂರು ಗ್ರಾಮಾಂತರ (ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ) ವಲಯದಲ್ಲಿ 16.7 ಲಕ್ಷ ವಾಹನಗಳು ನೋಂದಣಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಾರ್ವಜನಿಕ ವಾಹನಗಳ ನೋಂದಣಿ ಇಳಿಮುಖ: ರಾಜ್ಯದಲ್ಲಿರುವ ವಿವಿಧ ಆರ್ಟಿಒ ಕಚೇರಿಗಳಲ್ಲಿ ನೋಂದಣಿ ಆಗುತ್ತಿರುವ ವಾಹನಗಳ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ 1.44 ಕೋಟಿಗೆ ಮುಟ್ಟಿದ್ದರೆ, ಕಾರುಗಳು 23.7 ಲಕ್ಷದಟ್ಟಿದೆ. ಆದರೆ, ಸಾರ್ವಜನಿಕ ವಾಹನಗಳ ಸಂಖ್ಯೆ ಇಳಿಮುಖವಾಗಿದ್ದು, 1 ಲಕ್ಷದಷ್ಟು ಬಸ್ಗಳು, 3.3 ಲಕ್ಷ ಕ್ಯಾಬ್, 4.4 ಲಕ್ಷದಷ್ಟು ಆಟೋರಿಕ್ಷಾಗಳು ನೋಂದಣಿಯಾಗಿವೆ.
ವರ್ಷವಾರು ನೋಂದಣಿ ಸಂಖ್ಯೆ: 2011 ರ ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 6.1 ಕೋಟಿಯಷ್ಟಿದ್ದು, ವಾಹನಗಳ ಸಂಖ್ಯೆ 1ಕೋಟಿಯಷ್ಟಿದೆ. 2008-09ರಲ್ಲಿ ವಾಹನಗಳ ಸಂಖ್ಯೆ 82.9 ಲಕ್ಷ ದಷ್ಟಿದ್ದರೆ, 2011-12ರಲ್ಲಿ 1 ಕೋಟಿಗೆ ಮುಟ್ಟಿದೆ. 2015-16ರ ಸಾಲಿಗೆ 1.6 ಕೋಟಿಯಷ್ಟಿದ್ದ ವಾಹನಗಳು ವಿವಿಧ ಆರ್ಟಿಒ ಕಚೇರಿಗಳಲ್ಲಿ ನೋಂದಣಿಯಾಗಿದ್ದರೆ, ಈಗ 2 ಕೋಟಿಯನ್ನು ಮೀರಿದೆ.







