ವಿಜಯಪುರ: ಕೇವಲ 16 ವರ್ಷಕ್ಕೆ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಏಕಾಏಕಿ ಕುಸಿತ
ವಿಜಯಪುರ, ಅ. 1: ಕೇವಲ ಹದಿನಾರೇ ವರ್ಷಗಳಲ್ಲೇ ವಿಜಯಪುರ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿದ್ದ ಸೇತುವೆ ಹಠಾತ್ತನೆ ಕುಸಿದು ಬಿದ್ದಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೋಮವಾರ ಇಲ್ಲಿನ ವಿಜಯಪುರ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ರತ್ನಾಪೂರ ಗ್ರಾಮದ ಬಳಿಯ ನಿರ್ಮಿಸಿದ್ದ ಸೇತುವೆ ಏಕಾಏಕಿ ಮಧ್ಯಭಾಗಕ್ಕೆ ಮುರಿದು ಬಿದ್ದಿದೆ. ಇದರ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತ ಮಾಡಲಾಗಿದೆ.
ಈ ಹೆದ್ದಾರಿಯಲ್ಲಿನ ಸೇತುವೆಯನ್ನು 2002ರಲ್ಲಿ ನಿರ್ಮಿಸಲಾಗಿತ್ತು. ಆದರೆ, ಸೇತುವೆ ನಿರ್ಮಾಣಗೊಂಡ ಕೇವಲ 16 ವರ್ಷಕ್ಕೆ ನೆಲಕ್ಕೆ ಬಿದ್ದಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ಹಾಗೂ ವಾಹನ ಸವಾರರು ಆಕ್ರೋಶಗೊಂಡಿದ್ದಾರೆ. ಸೇತುವೆ ಕುಸಿದದ್ದರಿಂದಾಗಿ ಹೆದ್ದಾರಿ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ವಾಹನಗಳ ಸ್ಥಗಿತದ ಹಿನ್ನೆಲೆಯಲ್ಲಿ ಅಥಣಿ ಠಾಣಾ ಸಂಚಾರಕ್ಕೆ ಪೊಲೀಸರು, ರತ್ನಾಪೂರ-ತಿಕೋಟ ಮಾರ್ಗವಾಗಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಮುರಿದು ಬಿದ್ದ ಸೇತುವೆಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ, ಗ್ರಾಮಸ್ಥರು ಹಾಗೂ ವಾಹನ ಸವಾರರು ಛೀಮಾರಿ ಹಾಕಿದ್ದು, ಕೂಡಲೇ ಸೇತುವೆ ದುರಸ್ತಿಗೆ ಆಗ್ರಹಿಸಿದ್ದಾರೆ.





