ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆದು, ಬಿಜೆಪಿ ಸೇರುವುದಿಲ್ಲ: ಶಾಸಕ ಡಾ.ಉಮೇಶ್ ಜಾಧವ್
"ಖರ್ಗೆ ವಿರುದ್ಧ ಸ್ಪರ್ಧಿಸುವುದು ಕನಸಿನ ಮಾತು"

ಶಾಸಕ ಡಾ.ಉಮೇಶ್ ಜಾಧವ್
ಕಲಬುರ್ಗಿ, ಅ. 1: ‘ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಿರೋಧವಾಗಿ ಆಯ್ಕೆಮಾಡಬೇಕೆನ್ನುವವ ನಾನು. ಹೀಗಿರುವಾಗಿ ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆಂಬುದು ನಿಜಕ್ಕೂ ಕನಸಿನ ಮಾತಷ್ಟೇ’ ಎಂದು ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸೇರುವಂತೆ ತಮಗೆ ಕೆಲ ಮುಖಂಡರು ದೂರವಾಣಿ ಮೂಲಕ ಸಂಪರ್ಕಿಸಿ, ಖುದ್ದಾಗಿ ಭೇಟಿಯಾಗಿ ಕೇಳಿಕೊಂಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ತೊರೆದು, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲ ಬಿಜೆಪಿ ಮುಖಂಡರು ನನಗೆ ವಿವಿಧ ಆಮಿಷವೊಡ್ಡಿದ್ದಾರೆ. ಆದರೆ, ತಾನು ಅವರ ಆಮಿಷಕ್ಕೆ ಬಲಿಯಾಗುವುದಿಲ್ಲ. ಇನ್ನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ವೈದ್ಯ ವೃತ್ತಿ ಬಿಟ್ಟ ನಂತರ ನಾನು ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಆರಂಭಿಸಿದ್ದೇನೆ. ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ಎಂದು ಅವರು ಹೇಳಿದರು.
Next Story





