ವೈಮಾನಿಕ ಪ್ರದರ್ಶನ ಉಸ್ತುವಾರಿ ಎಚ್‌ಎಎಲ್ ವಹಿಸಿಕೊಳ್ಳಲಿದೆ: ಏರ್ ಮಾರ್ಷಲ್ ಆರ್.ಕೆ.ಸಿಂಗ್
ಬೆಂಗಳೂರು, ಅ.1: ರಕ್ಷಣಾ ಪ್ರದರ್ಶನ ಸಂಘಟನೆಯ(ಡಿಇಒ) ಮರು ರಚನೆಯಾಗಿರುವುದರಿಂದ ಭಾರತ ವೈಮಾನಿಕ ಪ್ರದರ್ಶನ 2019 ಪ್ರದರ್ಶನದ ಉಸ್ತುವಾರಿಯನ್ನು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ವಹಿಸಿಕೊಳ್ಳಲಿದೆ ಎಂದು ಎಂದು ಏರ್ ಮಾರ್ಷಲ್ ಆರ್.ಕೆ ಸಿಂಗ್ ಬದೌರಿಯಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಮುಂದಿನ ವರ್ಷ ಫೆ.20 ರಿಂದ 24 ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ಉಸ್ತುವಾರಿಯನ್ನು ಎಚ್‌ಎಲ್ ವಹಿಸಿಕೊಳ್ಳಲಿದೆ. ಇಷ್ಟು ವರ್ಷ ಡಿಇಒ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬಂದಿತ್ತು. ಆದರೆ ಇದೀಗ ಡಿಇಒವನ್ನು ಮರುರಚನೆ ಮಾಡಲಾಗಿರುವುದರಿಂದ ಈ ವರ್ಷದ ಉಸ್ತುವಾರಿ ಎಚ್‌ಎಲ್‌ಗೆ ನೀಡಲಾಗಿದೆ. ಪ್ರಧಾನಿ ಮೋದಿಯನ್ನು ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡುವಂತೆ ಕೋರಲಾಗುತ್ತದೆ ಎಂದರು.
ರಾಫೆಲ್ ಯುದ್ಧ ವಿಮಾನ ಮುಂದಿನ ಏರ್ ಶೋದಲ್ಲಿ ಭಾಗವಹಿಸಲಿದೆ. ಆದರೆ ಭಾರತೀಯ ವಾಯುಪಡೆಗೆ ಪೂರೈಸಲಿರುವ ರಾಫೆಲ್ ಯುದ್ಧ ವಿಮಾನ ಇನ್ನೂ ಸಿದ್ಧವಾಗದಿರುವುದರಿಂದ ಅದು ಭಾಗವಹಿಸಲು ಸಾಧ್ಯವಿಲ್ಲ. ಫ್ರಾನ್ಸ್‌ನ ಡಸ್ಸೌಲ್ಟ್ ಸಂಸ್ಥೆ ಏರ್ ಶೋದಲ್ಲಿ ಬೇರೆ ರಾಫೆಲ್ ಯುದ್ಧ ವಿಮಾನವನ್ನು ಹಾರಿಸಬಹುದೆಂಬ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಮುಂದಿನ ವರ್ಷ ಸೆಪ್ಟೆಂಬರ್ ನಂತರ ಡಸ್ಸೌಲ್ಟ್ ವಾಯುಯಾನ ಸಂಸ್ಥೆ 36 ರಾಫೆಲ್ ಬಹು ಕಾರ್ಯವಿಧಾನದ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಪೂರೈಸಲಿದೆ. ಅತ್ಯಾಧುನಿಕ ನಾಲ್ಕನೇ ತಲೆಮಾರಿನ ರಾಫೆಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ರಷ್ಯಾ ನಿರ್ಮಿತ ಹಳೆಯ ಮಿಗ್-21 ಯುದ್ಧ ವಿಮಾನದ ಬದಲಿಗೆ ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.







