ಕುಂದಾಪುರ: ದಲಿತರ, ಕೃಷಿ ಕೂಲಿಕಾರರ ಹಕ್ಕುಗಳಿಗೆ ಆಗ್ರಹಿಸಿ ಧರಣಿ

ಕುಂದಾಪುರ, ಅ.1: ಜಾತಿ ಅಸ್ಪಶ್ಯತೆ, ಅಸಮಾನತೆ, ಅವಮಾನಗಳನ್ನು ವಿರೋಧಿಸಿ, ದಲಿತರ ಶಿಕ್ಷಣ, ಉದ್ಯೋಗ, ಭೂಮಿ, ಮನೆ, ಆರೋಗ್ಯಕ್ಕೆ ಮತ್ತು ದಲಿತ ಮೀಸಲಾತಿ, ದೌರ್ಜನ್ಯ ತಡೆ ಕಾಯ್ದೆಗಳನ್ನು ಬಲಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಕುಂದಾಪುರ ತಾಲೂಕು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಸೋಮವಾರ ಕುಂದಾಪುರ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ದಲಿತ ಮತ್ತು ಇತರ ಬಡ ಕೂಲಿಕಾರರಿಗೆ ಮನೆ, ನಿವೇಶನಕ್ಕೆ ಸರಕಾರಿ ಜಾಗ ಗುರುತಿಸಿ ಹಕ್ಕು ಪತ್ರ ಕೊಡಬೇಕು. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಕಾದಿರಿಸಿದ ಡಿಸಿ ಮನ್ನಾ ಜಾಗ ವಿತರಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಿ.ಎಂ.ರವಿ, ಅರುಣ್ ಕುಮಾರ ಗಂಗೊಳ್ಳಿ, ನಾಗರತ್ನ ನಾಡ, ಕೃಷಿಕೂಲಿ ಕಾರ್ಮಿಕ ಮುಖಂಡರಾದ ಎಚ್.ನರಸಿಂಹ, ಸುರೇಶ ಕಲ್ಲಾಗರ, ರಾಜೀವ ಪಡುಕೋಣೆ, ಚಿಕ್ಕ ಮೊಗವೀರ ಗಂಗೊಳ್ಳಿ, ಆನಂದ ಗಂಗೊಳ್ಳಿ, ಶೀಲಾವತಿ, ಗೋಪಾಲ ನಾಯ್ಕ ದೇವಲ್ಕುಂದ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ದಲಿತ, ಕೃಷಿಕೂಲಿಗಾರರು ಕುಂದಾಪುರ ಶಾಸ್ತ್ರಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಧರಣಿಯ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.







