ಪ್ರತಿಭಟನೆಯ ವೇಳೆ ಹಿಂಸಾಚಾರ ತಡೆಗೆ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರ

ಹೊಸದಿಲ್ಲಿ, ಅ.1 ಪ್ರತಿಭಟನೆಗಳ ಹೆಸರಿನಲ್ಲಿ ‘‘ ಹಿಂಸಾಚಾರ ಹಾಗೂ ಗೂಂಡಾಗಿರಿಯ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.
ಮೂಲಭೂತವಾದಿ ಸಂಘಟನೆಗಳು ಹಾಗೂ ಪುಂಡು ಶಕ್ತಿಗಳು ಪ್ರತಿಭಟನೆಯ ಹೆಸರಿನಲ್ಲಿ ನಡೆಸುವ ಹಿಂಸಾಚಾರದ ಕೃತ್ಯಗಳ ವಿರುದ್ಧ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕೆಂದು ಕೇರಳ ಕೊಡಂಗನಲ್ಲೂರು ಫಿಲ್ಮ್ ಸೊಸೈಟಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸುಪ್ರೀಂಕೋರ್ಟ್ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚಿಸಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಕರ್ಣಿ ಸೇನಾ ಸೇರಿದಂತೆ ಕೆಲವು ಮೂಲಭೂತವಾದಿ ಸಂಘಟನೆಗಳು ದೇಶದ ವಿವಿಧೆಡೆ ಪ್ರತಿಭಟನೆ ಗಳನ್ನು ಹಾಗೂ ಹಿಂಸಾಚಾರವನ್ನು ಎಸಗಿದ್ದ ಸಂದರ್ಭದಲ್ಲಿ ಈ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು.
ದೇಶಾದ್ಯಂತ ಪ್ರತಿಭಟನೆಗಳ ಸಂದರ್ಭದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುವ ಘಟನೆಗಳು ನಡೆಯುತ್ತಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದೆಯೆಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಡ ನ್ಯಾಯಪೀಠ ತಿಳಿಸಿದೆ.
ಪ್ರತಿಭಟನೆಯ ಹೆಸರಿನಲ್ಲಿ ಗುಂಪುಗಳಿಂದ ನಡೆಯುವ ಹಿಂಸೆಯನ್ನು ತಡೆಯಲು ತಾನು ಸವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸುವುದಾಗಿಯೂ ಉನ್ನತ ನ್ಯಾಯಾಲಯ ತಿಳಿಸಿದೆ.
ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳ ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗುತ್ತಿದ್ದಾರೆಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಾಧೀಶರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಗೂಂಡಾಗಿರಿ ಹಗಾಗೂ ಗಲಭೆಯ ಪ್ರಕರಣಗಳಲ್ಲಿ ಪೊಲೀಸ್ ಅಧೀಕ್ಷಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಳನು ಜವಾಬ್ದಾರರನ್ನಾಗಿಸಬೇಕೆಂದು ವೇಣುಗೋಪಾಲ್ ನ್ಯಾಯಾಲಯವನ್ನು ಕೋರಿದರು.







