2017ನೇ ಸಾಲಿನ ಚಲನಚಿತ್ರ ರಂಗದ ಪ್ರಶಸ್ತಿ ಪ್ರಕಟ

ಕಲಾವಿದೆ ಲಕ್ಷ್ಮಿ, ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್
ಬೆಂಗಳೂರು, ಅ.1: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನಚಿತ್ರರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ 2017 ನೇ ಕ್ಯಾಲೆಂಡರ್ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗಾಗಿ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಜೀವಿತಾವಧಿ ಸಾಧನೆಗೆ ನೀಡುವ ಡಾ.ರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಲಕ್ಷ್ಮಿಯನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ಜೀವಮಾನ ಸಾಧನೆಗೆ ಪುಟ್ಟಣ್ಣಕಣಗಾಲ್ ಪ್ರಶಸ್ತಿಗಾಗಿ ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಮತ್ತು ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವಸಾಧನೆ ಮಾಡಿದ ಹಿರಿಯ ಚೇತನಗಳಿಗೆ ನೀಡುವ ಜೀವಮಾನ ಸಾಧನೆ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ಚಲನಚಿತ್ರ ನಿರ್ಮಾಪಕ ಜಿ.ಎನ್.ಲಕ್ಷ್ಮಿಪತಿಯನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ 2 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆ. 2017 ನೇ ಕ್ಯಾಲೆಂಡರ್ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲು ಹಿರಿಯ ನಟ, ನಿರ್ಮಾಪಕ ಜೆ.ಕೆ.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಹಿರಿಯ ನಟಿ ಹೇಮಾಚೌಧರಿ, ಸಂಕಲನಕಾರ ಸುರೇಶ್ಅರಸ್, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.
ಸಮಿತಿಯ ಸದಸ್ಯರು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ ತಮ್ಮ ವರದಿಯನ್ನು ಸಲ್ಲಿಸಿದರು.







