ಆದಿತ್ಯನಾಥ್ ಎಲ್ಲ ಬೇಡಿಕೆಗಳನ್ನು ಒಪ್ಪಿದ್ದಾರೆ: ಪೊಲೀಸರಿಂದ ಹತ್ಯೆಗೀಡಾದ ಆ್ಯಪಲ್ ಉದ್ಯೋಗಿಯ ಪತ್ನಿ

ಲಖ್ನೊ, ಅ.1: ಆ್ಯಪಲ್ ಸಂಸ್ಥೆಯ ಉದ್ಯೋಗಿ ವಿವೇಕ್ ತಿವಾರಿಯನ್ನು ಲಕ್ನೋ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವ ಪ್ರಕರಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಸೋಮವಾರ ಮೃತರ ಪತ್ನಿ ಮತ್ತು ಪುತ್ರಿಯನ್ನು ಭೇಟಿಯಾದರು. ಮುಖ್ಯಮಂತ್ರಿ ನಿವಾಸದಲ್ಲಿ ವಿವೇಕ್ ತಿವಾರಿ ಪತ್ನಿ ಕಲ್ಪನಾ ತಿವಾರಿ ಮತ್ತು ಪುತ್ರಿಯ ಜೊತೆ ಮಾತನಾಡಿದ ಆದಿತ್ಯನಾಥ್ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಜೊತೆಗೆ ಮಕ್ಕಳ ಶಿಕ್ಷಣಕ್ಕಾಗಿ ಐದು ಲಕ್ಷ ರೂ. ಮತ್ತು ವೃದ್ಧ ತಾಯಿಗೆ ಐದು ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕಲ್ಪನಾ ತಿವಾರಿ, “ನನ್ನ ಮಾತುಗಳನ್ನು ಮುಖ್ಯಮಂತ್ರಿಯವರು ಗಮನವಿಟ್ಟು ಆಲಿಸಿದ್ದಾರೆ. ನಾನು ಯಾವುದೇ ಕಠಿಣ ನಿಲುವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ನನಗೆ ಸರಕಾರದ ಮೇಲೆ ನಂಬಿಕೆಯಿದೆ ಎಂದು ಈ ಹಿಂದೆ ನಾನು ತಿಳಿಸಿದ್ದೆ. ಇಂದು ಆ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ” ಎಂದು ತಿಳಿಸಿದ್ದಾರೆ.
“ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ನನಗೆ ಉದ್ಯೋಗ ನೀಡಬೇಕು, ಪುತ್ರಿಯ ಶಿಕ್ಷಣ ಮತ್ತು ವೃದ್ಧ ಅತ್ತೆಯ ವೆಚ್ಚವನ್ನು ನೀಡಬೇಕು ಎಂದು ನಾನು ಆಗ್ರಹಿಸಿದ್ದೆ. ನನ್ನ ಎಲ್ಲ ಬೇಡಿಕೆಗಳನ್ನು ಅವರು ಒಪ್ಪಿಕೊಂಡಿದ್ದಾರೆ” ಎಂದು ಕಲ್ಪನಾ ತಿಳಿಸಿದ್ದಾರೆ. ಆ್ಯಪಲ್ ಸಂಸ್ಥೆ ಉದ್ಯೋಗಿ 38ರ ಹರೆಯದ ವಿವೇಕ್ ತಿವಾರಿ ತನ್ನ ಕಾರನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಶನಿವಾರ ಲಕ್ನೊ ಪೊಲೀಸರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಘಟನೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ಹಾಗೂ ಇನ್ನೋರ್ವ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿ ಬಂಧಿಸಲಾಗಿದೆ.







