ದುನಿಯಾ ವಿಜಯ್‌ಗೆ ಷರತ್ತು ಬದ್ಧ ಜಾಮೀನು

ಬೆಂಗಳೂರು, ಅ.1: ಜಿಮ್ ಟ್ರೈನರ್ ಮೇಲೆ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಹಾಗೂ ಸಹಚರರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ವಿಜಯ್ ಮತ್ತು ಸಹಚರರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರಿದ್ದ ನ್ಯಾಯಪೀಠ, ಸೆಲಬ್ರಿಟಿ ಎಂದರೆ ಇತರರಿಗೆ ಮಾದರಿಯಾಗಿರಬೇಕು. ಸಮಾಜದಲ್ಲಿ ಹಲವು ಮಾಧ್ಯಮಗಳಿದ್ದು, ಅದರ ಮುಂದೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ವಿಜಯ್‌ಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ವಿಜಯ್‌ಗೆ ಈ ಬಗ್ಗೆ ತಿಳಿ ಹೇಳುವಂತೆ ವಿಜಯ್ ಪರ ವಕೀಲ ಶಿವಕುಮಾರ್‌ಗೆ ನ್ಯಾಯಪೀಠ ತಿಳಿಸಿದೆ. ತನಿಖೆಗೆ ಸಹಕರಿಸುವಂತೆ ಹಾಗೂ ಸಾಕ್ಷ ನಾಶ ಮಾಡದಂತೆ ಸೂಚಿಸಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಮೂಲಕ 10 ದಿನಗಳ ಬಳಿಕ ನಟ ವಿಜಯ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಸೆ.22ರಂದು ಜಿಮ್ ಟ್ರೈನರ್ ಮಾರುತಿಗೌಡ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ವಿಜಯ್ ಹಾಗೂ ಜೊತೆಗಾರರನ್ನು ಬಂಧಿಸಲಾಗಿತ್ತು. ಘಟನೆ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಿಜಯ್ ಮತ್ತು ಆತನ ಸಹಚರರಾದ ಜಿಮ್ ತರಬೇತುದಾರ ಪ್ರಸಾದ್, ಸ್ನೇಹಿತ ಮಣಿ ಮತ್ತು ಚಾಲಕ ಪ್ರಸಾದ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜಾಮೀನಿಗಾಗಿ ವಿಜಯ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಜಾಮೀನು ಅರ್ಜಿ ಪದೇ ಪದೇ ವಜಾಗೊಳ್ಳುತ್ತಿತ್ತು.







