ಭಾರತ-ಉಝ್ಬೆಕಿಸ್ತಾನ್ ನಡುವೆ 17 ಒಪ್ಪಂದಗಳಿಗೆ ಅಂಕಿತ

ಹೊಸದಿಲ್ಲಿ,ಅ.1: ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾಮುಕ್ತ ಪ್ರಯಾಣ ಸೌಲಭ್ಯ ಮತ್ತು ಪ್ರವಾಸೋದ್ಯಮ,ರಾಷ್ಟ್ರೀಯ ಭದ್ರತೆ,ರಾಜತಾಂತ್ರಿಕ ಅಧಿಕಾರಿಗಳಿಗೆ ತರಬೇತಿ ಹಾಗು ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟದಲ್ಲಿ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 17 ಒಪ್ಪಂದಗಳಿಗೆ ಭಾರತ ಮತ್ತು ಉಝ್ಬೆಕಿಸ್ತಾನ್ ಸೋಮವಾರ ಅಂಕಿತ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉಝ್ಬೆಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಝಿಯೊಯೇವ್ ಅವರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲು ಒಪ್ಪಿಕೊಂಡರು.
ಮಿಲಿಟರಿ ಶಿಕ್ಷಣ,ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು,ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಕ್ಷೇತ್ರಗಳಲ್ಲಿ ಸಹಭಾಗಿತ್ವ ಇವು ಉಭಯ ರಾಷ್ಟ್ರಗಳು ಅಂಕಿತ ಹಾಕಿರುವ ಒಪ್ಪಂದಗಳಲ್ಲಿ ಸೇರಿವೆ.
ಔಷಧಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಡಂಬಡಿಕೆಯೊಂದಕ್ಕೂ ಸಹಿ ಹಾಕಲಾಗಿದೆ.
ಮಾನವ ಕಳ್ಳ ಸಾಗಾಣಿಕೆ ಮತ್ತು ಅಕ್ರಮ ಮಾದಕ ದ್ರವ್ಯಗಳ ವಿರುದ್ಧ ಹೋರಾಟದಲ್ಲಿ ಪರಸ್ಪರ ಸಹಕರಿಸಲೂ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶ ಅನ್ವೇಷಣೆಯಲ್ಲಿಯೂ ಉಭಯ ರಾಷ್ಟ್ರಗಳು ಪರಸ್ಪರ ಸಹಕರಿಸಲಿವೆ. ಭಾರತ-ಉಝ್ಬೆಕಿಸ್ತಾನ್ ಉದ್ಯಮ ಮಂಡಳಿಯ ಮೂಲಕ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಂಬಂಧಗಳನ್ನು ಉತ್ತೇಜಿಸಲು ಒಪ್ಪಂದವೊಂದಕ್ಕೂ ಅಂಕಿತ ಹಾಕಲಾಗಿದೆ.







