ಸಾಲ ಬಾಧಿತ ಐಎಲ್‌ಎಫ್‌ಎಸ್ ಸಂಸ್ಥೆ ಕೇಂದ್ರದ ತೆಕ್ಕೆಗೆ
ಹೊಸದಿಲ್ಲಿ, ಅ.2:ಆರ್ಥಿಕ ಸಂಕಷ್ಟದಲ್ಲಿರುವ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್(ಐಎಲ್‌ಆ್ಯಂಡ್‌ಎಫ್‌ಎಸ್) ಸಂಸ್ಥೆಯನ್ನು ಕೇಂದ್ರ ಸರಕಾರವು ಸೋಮವಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಐಎಲ್‌ಆ್ಯಂಡ್‌ಎಫ್‌ಎಸ್ ಕಂಪೆನಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿ ತಾನು ಸಲ್ಲಿಸಿದ ಅರ್ಜಿಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣವು ಅನುಮೋದನೆ ನೀಡಿದ ಬೆನ್ನಲ್ಲೇ ಮೋದಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಸಾಲಬಾಧೆಯಿಂದ ತತ್ತರಿಸಿರುವ ಈ ಹಣಕಾಸು ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಯ ದಿವಾಳಿಯಂಚಿಗೆ ತಲುಪಿರುವುದು, ಭಾರತೀಯ ಶೇರುಮಾರುಕಟ್ಟೆಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಐಎಲ್‌ಆ್ಯಂಡ್‌ಎಫ್‌ಎಸ್‌ನ ಆಡಳಿತ ಮಂಡಳಿಯನ್ನು ವಿಸರ್ಜಿಸುವಂತೆ ಕೋರಿ ಕೇಂದ್ರ ಸರಕಾರವು ರಾಷ್ಟ್ರೀಯ ಕಂಪೆನಿ ನ್ಯಾಯಾಧೀರಣಕ್ಕೆ ಅರ್ಜಿ ಸಲ್ಲಿಸಿತ್ತು. ಸೋಮವಾರ ಮಧ್ಯಾಹ್ನದ ವೇಳೆ ಸರಕಾರಕ್ಕೆ ಸಂಸ್ಥೆಯ ಎಲ್ಲಾ ಆಡಳಿತ ನಿರ್ದೇಶಕರನ್ನು ವಜಾಗೊಳಿಸಲು ಅನುಮತಿ ದೊರೆತಿತ್ತು.
ಕಂಪೆನಿಯ ನೂತನ ಮಂಡಳಿಯು ಅಕ್ಟೋಬರ್ 8ಕ್ಕೆ ಸಭೆ ಸೇರಲಿದ್ದಾರೆ ಹಾಗೂ ಐಎಲ್‌ಎಫ್‌ಎಸ್‌ಗಾಗಿ ನೂತನ ಮಾರ್ಗನಕ್ಷೆಯನ್ನು ಸಿದ್ಧಪಡಿಸಲಿದ್ದಾರೆಂದು ಎನ್‌ಸಿಎಲ್‌ಟಿ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರಕಾರ ನೇಮಿಸಲಿರುವ ಆರು ಮಂದಿ ಸದಸ್ಯರ ನೂತನ ಆಡಳಿತ ಮಂಡಳಿಯಲ್ಲಿ ಭಾರತದ ಅತಿ ಶ್ರೀಮಂತ ಬ್ಯಾಂಕರ್ ಎನಿಸಿರುವ ಉದಯ್ ಕೋಟಕ್, ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಜಿ.ಸಿ. ಚತುರ್ವೇದಿ, ವಿನೀತ್ ನಯ್ಯರ್, ಮಾಲಿನಿಶಂಕರ್, ನಂದಕಿಶೋರ್ ಹಾಗೂ ಜಿ.ಎನ್.ಭಾಜಪೇಯಿ ಇದ್ದಾರೆ.
ನೂತನ ಮಂಡಳಿಯ ತನ್ನ ಮೊದಲ ಸಭೆಯಲ್ಲಿ ಐಎಲ್‌ಆ್ಯಂಡ್‌ಎಫ್‌ಎಸ್ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ.
ಐಎಲ್‌ಆ್ಯಂಡ್‌ಎಫ್‌ಎಸ್ ಹಾಗೂ ಸಹಸಂಸ್ಥೆಗಳು 91 ಸಾವಿರ ಕೋಟಿ ರೂ.ಗೂ ಅಧಿಕ ಸಾಲದ ಹೊರೆಯನ್ನು ಹೊಂದಿದ್ದು, ಹಲವಾರು ಬ್ಯಾಂಕ್‌ಗಳಿಗೆ ಸಾಲ ಸುಸ್ತಿ ಮಾಡಿವೆ.
ಐಎಲ್‌ಆ್ಯಂಡ್‌ಎಫ್‌ಎಸ್‌ನ ಭವಿಷ್ಯದ ಬಗ್ಗೆ ಭುಗಿಲೆದ್ದ ಆತಂಕವು ಶೇರುಮಾರುಕಟ್ಟೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿತ್ತು.







