ವಕೀಲರ ಹಾಡನ್ನು ನಿಲ್ಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

ಹೊಸದಿಲ್ಲಿ,ಅ.1: ನಿವೃತ್ತಿಗೆ ಮುನ್ನ ಕೊನೆಯ ಬಾರಿಗೆ ಸೋಮವಾರ ತನ್ನ ಉತ್ತರಾಧಿಕಾರಿ ನ್ಯ್ಯಾ.ರಂಜನ್ ಗೊಗೊಯ್ ಮತ್ತು ನ್ಯಾ.ಎ.ಎಂ.ಖನ್ವಿಲ್ಕರ್ ಅವರೊಂದಿಗೆ ನ್ಯಾಯಾಲಯ ಕಲಾಪಗಳನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತನಗೆ ದೀರ್ಘಾಯುಷ್ಯವನ್ನು ಕೋರಿ ವಕೀಲರೋರ್ವರು ಗುನುಗುನಿಸುತ್ತಿದ್ದ ಹಾಡನ್ನು ತಡೆದು,ತಾನೀಗ ಹೃದಯದಿಂದ ಪ್ರತಿಕ್ರಿಯಿಸುತ್ತಿದ್ದೇನೆ, ಸಂಜೆ ಮನಸಿನ ಮಾತುಗಳನ್ನು ಹೇಳುತ್ತೇನೆ ಎಂದರು.
ಕಳೆದ 10 ದಿನಗಳಲ್ಲಿ ಆಧಾರ್ ಮತ್ತು ಸಲಿಂಗಕಾಮದಂತಹ ವಿಷಯಗಳಲ್ಲಿ ಮಹತ್ವದ ಸರಣಿ ತೀರ್ಪುಗಳನ್ನು ನೀಡಿದ ಪೀಠಗಳ ನೇತೃತ್ವ ವಹಿಸಿದ್ದ ಮು.ನ್ಯಾ.ಮಿಶ್ರಾ ಅವರು ಸೋಮವಾರ ಸುಮಾರು 25 ನಿಮಿಷಗಳ ಸಂಕ್ಷಿಪ್ತ ನ್ಯಾಯಾಲಯ ಕಲಾಪಗಳ ವೇಳೆ ಭಾವೋದ್ವೇಗಗೊಂಡವರಂತೆ ಕಾಣುತ್ತಿದ್ದರು.
ಕಲಾಪದ ಅಂತಿಮ ಹಂತಲ್ಲಿಯ ಹಳೆಯ ಹಿಂದಿ ಚಿತ್ರಗೀತೆ ‘ತುಮ್ ಜಿಯೋ ಹಝಾರೋಂ ಸಾಲ್...’ ಅನ್ನು ವಕೀಲರೋರ್ವರು ಗುನುಗತೊಡಗಿದ್ದು,ಮು.ನ್ಯಾ. ಮಿಶ್ರಾ ಅವರು ತನ್ನದೇ ಆದ ಶೈಲಿಯಲ್ಲಿ ಅದನ್ನು ನಿಲ್ಲಿಸಿದರು.
ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತರಾಗಿರುವ ನ್ಯಾ.ಗೊಗೊಯ್ ಅವರು ಅ.3ರಂದು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.





