ನಮ್ಮ ಹೆಲಿಕಾಪ್ಟರ್ ಭಾರತದ ಗಡಿ ದಾಟಿರಲಿಲ್ಲ: ಪಿಒಕೆ ಪ್ರಧಾನಿ

ಇಸ್ಲಾಮಾಬಾದ್,ಅ.1: ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್ ಭಾರತದ ಗಡಿ ಸಮೀಪ ಹಾರಾಡಿದ ಘಟನೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್, ತಾನು ಪ್ರಯಾಣಿಸುತ್ತಿದ್ದ ಬಿಳಿ ಹೆಲಿಕಾಪ್ಟರ್ ನಿಯಂತ್ರಣ ರೇಖೆಯ ಸಮೀಪವಿದ್ದಿದ್ದು ನಿಜ ಆದರೆ ಅದು ಪಾಕಿಸ್ತಾನದ ವಾಯುಭಾಗದಲ್ಲೇ ಇತ್ತು. ಅದು ಸೇನಾ ಹೆಲಿಕಾಪ್ಟರ್ ಅಲ್ಲದ ಕಾರಣ ಭಾರತೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವ ಅಗತ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.
ರವಿವಾರದಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಭಾಗವನ್ನು ಉಲ್ಲಂಘಿಸಿದ ಪಾಕಿಸ್ತಾನಿ ಹೆಲಿಕಾಪ್ಟರ್ ಗಡಿನಿಯಂತ್ರಣ ರೇಖೆಯ ಸಮೀಪ ಹಾರಾಡಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದರು. ವಾಯುಭಾಗ ಉಲ್ಲಂಘನೆಯನ್ನು ಕಂಡ ಭಾರತೀಯ ಸೇನೆ ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಕೂಡಲೇ ಹೆಲಿಕಾಪ್ಟರ್ ವಾಪಸ್ ತೆರಳಿತ್ತು. ರವಿವಾರದಂದು ನಾನು, ಇತರ ಇಬ್ಬರು ಮಂತ್ರಿಗಳು ಮತ್ತು ಅಧಿಕಾರಿಗಳ ಸಹಿತ ಬಿಳಿ ಬಣ್ಣದ ನಾಗರಿಕ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕ್ ಆಕ್ರಮಿತ ಕಾಶ್ಮೀರದ ನಾಯಕ ಹೈದರ್ ತಿಳಿಸಿದ್ದಾರೆ.
ಕಹುತಾ ಪ್ರದೇಶದಲ್ಲಿ ಸಚಿವರ ಸಹೋದರರೊಬ್ಬರ ಸಾವಿಗೆ ಸಂತಾಪ ಸೂಚಿಸಲು ನಾನು ಅಲ್ಲಿಗೆ ತೆರಳಿದ್ದೆ. ಜೊತೆಗೆ ಅಲ್ಲಿನ ನಿವಾಸಿಗಳ ಜೊತೆ ಮಾತುಕತೆ ನಡೆಸಲು ಬಯಸಿದ್ದೆ. ಈ ಪ್ರದೇಶವು ನಿಯಂತ್ರಣ ರೇಖೆಯ ಸಮೀಪವಿದೆ. ನಾವು ಅಬ್ಬಾಸ್‌ಪುರದ ಸಮೀಪ ಪ್ರಯಾಣಿಸುತ್ತಿದ್ದ ವೇಳೆ ಭಾರತೀಯ ಸೇನೆ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದೆ. ಅದೃಷ್ಟವಶಾತ್, ನಮ್ಮಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ನಮ್ಮ ಹೆಲಿಕಾಪ್ಟರ್‌ಗೂ ಯಾವುದೇ ಹಾನಿಯಾಗಿಲ್ಲ ಎಂದು ಹೈದರ್ ತಿಳಿಸಿದ್ದಾರೆ.
ಪಾಕಿಸ್ತಾನ ವಿರೋಧ ಪಕ್ಷ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್) ಅಧ್ಯಕ್ಷ ಶಾಹಬಾಝ್ ಶರೀಫ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಅಂತರ್‌ರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ರಾಜತಾಂತ್ರಿಕ ನಿಯಮಗಳ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಪಿಎನ್‌ಬಿ







