ಮಧ್ಯಪ್ರದೇಶದಲ್ಲಿ ಗೋವಿಗೆ ಸಚಿವಾಲಯ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಘೋಷಣೆ

ಹೊಸದಿಲ್ಲಿ,ಅ.2: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಮಧ್ಯಪ್ರದೇಶದಲ್ಲಿ, ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರು, ಗೋವುಗಳ ಸೇವೆಗಾಗಿ ನೂತನ ಸಚಿವಾಲಯವೊಂದನ್ನು ರಚಿಸುವುದಾಗಿ ಘೋಷಿಸಿದ್ದಾರೆ.
ಖಜುರಾಹೋದಲ್ಲಿ ಸೋಮವಾರ ನಡೆದ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಈಗ ಅಸ್ತಿತ್ವದಲ್ಲಿರುವ ಗೋ ಸಂವರ್ಧನೆ ನಿಗಮವನ್ನು ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಆದನ್ನು ರದ್ದುಪಡಿಸಿ, ಗೋಸೇವಾ ಇಲಾಖೆ ಸ್ಥಾಪನೆಯಾಗಲಿದೆಯೆಂದು ತಿಳಿಸಿದರು. ಗೋವು ಸಚಿವಾಲಯ ಸ್ವತಂತ್ರ ಖಾತೆಯಾಗಿ ಕಾರ್ಯನಿರ್ವಹಿಸಲಿದ್ದು, ಗೋವುಗಳ ಸೇವೆಗೆ ಉತ್ತಮ ಮಾರ್ಗಗಳನ್ನು ಕಂಡುಹಿಡಿಯಲಿದೆಯೆಂದು ಅವರು ತಿಳಿಸಿದರು.
ಗೋವುಗಳ ಕಲ್ಯಾಣಕ್ಕಾಗಿ ನೂತನ ಸಚಿವಾಲಯವೊಂದನ್ನು ಸ್ಥಾಪಿಸುವಂತೆ ಗೋ ಸಂವರ್ಧನೆ ನಿಗಮದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಹಾಗೂ ಹಾಲಿಸಂಪುಟ ಸಚಿವರೂ ಆಗಿರುವ ಸ್ವಾಮಿ ಅಖಿಲೇಶ್ವರಾನಂದ ಗಿರಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಕೆಲವೇ ದಿನಗಳು ಬಾಕಿಯುಳಿದಿರುವಂತೆಯೇ, ಚೌಹಾಣ್ ನೂತನ ಗೋವು ಸೇವಾ ಸಚಿವಾಲಯದ ಘೋಷಣೆ ಮಾಡಿದ್ದಾರೆ. ಈ ಮೊದಲು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ಪಂತ್ ಅವರು ತನ್ನ ಪಕ್ಷ ಅಧಿಕಾರಕ್ಕೇರಿದಲ್ಲಿ ರಾಜ್ಯದ ತಲಾ 23,026 ಗ್ರಾಮಪಂಚಾಯತ್‌ಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.







