ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಕಾದು ಸುಸ್ತಾದ ಪೊಲೀಸರು

ಹತ್ಯೆಯಾದ ರವಿಕುಮಾರ್
ತುಮಕೂರು,ಅ.1: ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ತುಮಕೂರು ಪೊಲೀಸರು ನ್ಯಾಯಾಲಯಕ್ಕೆ ನಾಕಾಬಂಧಿ ಹಾಕಿ ಆರೋಪಿಗಳನ್ನು ಬಂಧಿಸಲು ಕಾದು ಸುಸ್ತಾದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭಗೊಳ್ಳುವುದಕ್ಕೆ ಮುಂಚೆಯೇ ನ್ಯಾಯಾಲಯವನ್ನು ಸುತ್ತುವರೆದ ಪೊಲೀಸರು, ಆರೋಪಿಗಳು ಈಗ ಬರುತ್ತಾರೆ, ಮತ್ತೆ ಬರುತ್ತಾರೆ ಎನ್ನುವ ಮಾಹಿತಿಯಿಂದಾಗಿ ಸಂಜೆ 7ವರೆಗೆ ನ್ಯಾಯಾಲಯದಲ್ಲಿ ಕಾದುಕಾದು ಸುಸ್ತಾದರು. ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿಗಳು ನ್ಯಾಯಾಲಯದ ಆವರಣದಲ್ಲಿಯೇ ಬೀಡುಬಿಟ್ಟಿದ್ದರು. ನ್ಯಾಯಾಲಯವನ್ನು ಪ್ರವೇಶಿಸುವ ಸಾಧ್ಯತೆ ಇರುವ ಕಡೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದು, ನ್ಯಾಯಾಲಯದ ಆವರಣದಲ್ಲಿ ಕೊಲೆಗೀಡಾದ ರವಿ ಬೆಂಬಲಿಗರು ಸಹ ಕಾಣಿಸಿಕೊಂಡಿದ್ದರಿಂದ ಏನಾಗಲಿದೆ ಎನ್ನುವ ಕುತೂಹಲ ಮೂಡಿತ್ತು. ವಕೀಲರು ಹಾಗೂ ನ್ಯಾಯಾಲಯಕ್ಕೆ ಬಂದಿದ್ದ ಸಾರ್ವಜನಿಕರು ಆರೋಪಿಗಳು ಯಾವಾಗ ಶರಣಾಗಲಿದ್ದಾರೆ ಎಂದು ಪೊಲೀಸರನ್ನು ಕೇಳುತ್ತಿದ್ದುದು ಕಂಡುಬಂತು.
ಮಫ್ತಿಯಲ್ಲಿ ಸಿಬ್ಬಂದಿ: ನ್ಯಾಯಾಲಯದ ಆವರಣದಲ್ಲಿದ್ದವರು ಸಾರ್ವಜನಿಕರೋ, ಪೊಲೀಸರೋ ಎನ್ನುವಷ್ಟರ ಮಟ್ಟಿಗೆ ಪೊಲೀಸರು ಕಾದುಕುಳಿತಿದ್ದರು. ಅರೋಪಿಗಳು ಬಂದೇ ಬರುತ್ತಾರೆ ಎನ್ನುವ ಬಲವಾದ ನಂಬಿಕೆಯಿಂದಾಗಿ ಇನ್ಸ್ಪೆಕ್ಟರ್ ಗಳಾದ ಲಕ್ಷ್ಮಣ್, ರಾಘವೇಂದ್ರ, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ, ಡಿವೈಎಸ್ಪಿ ಕಲ್ಲೇಶಪ್ಪ, ಕ್ಯಾತ್ಸಂದ್ರ, ಎನ್ಇಪಿಎಸ್ ಠಾಣೆ ಹಾಗೂ ಜಿಲ್ಲಾ ಅಪರಾಧ ದಳದ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿಯೇ ಗಸ್ತು ಹೊಡೆದು ಸುಸ್ತಾದರು ಎಂದು ತಿಳಿದುಬಂದಿದೆ.
ಹಳೆ ದ್ವೇಷಕ್ಕೆ ಕೊಲೆ: ಮಾಜಿ ಮೇಯರ್ ರವಿಕುಮಾರ್ ಹಾಗೂ ಶಂಕಿತ ಕೊಲೆ ಆರೋಪಿ ಸುಜಯ್ ಇಬ್ಬರೂ ಒಂದು ಕಾಲದಲ್ಲಿ ಗೆಳೆಯರಾಗಿದ್ದವರು. ಬೆಂಗಳೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿತನಾಗಿದ್ದ ಸುಜಯ್ ಭಾರ್ಗವ್, ಜೈಲಿನಿಂದ ಬಿಡುಗಡೆಯಾದ ಮೇಲೆ ಕನ್ನಡ ಪರ ಸಂಘಟನೆಗಳಲ್ಲಿ ಸಕ್ರಿಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕರುನಾಡ ಸೇನೆ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತಿಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಯೊಬ್ಬರ ಪರವಾಗಿ ಚುನಾವಣಾ ಪ್ರಚಾರವನ್ನು ಮಾಡಿದ್ದ ಸುಜಯ್ ರವಿಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿದೆ.
ರಾಜಕೀಯವಾಗಿ ಬೆಳೆಯುತ್ತಿದ್ದ ರವಿಕುಮಾರ್ ಹಾಗೂ ಸುಜಯ್ ನಡುವೆ ಕಾರ್ಪೋರೇಷನ್ ಚುನಾವಣೆ ವೇಳೆ ಗಲಾಟೆ ನಡೆದಿತ್ತು, ಈ ಗಲಾಟೆಯೇ ರವಿಕುಮಾರ್ ಅವರ ಕೊಲೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸುಜಯ್ ಅವರೊಂದಿಗೆ ಗೌರಿಬಿದನೂರು ಹಾಗೂ ಹಿಂದೂಪುರ ಮೂಲದ ಯುವಕರ ತಂಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
ಕೊಲೆಗೆ ಬಾಡಿಗೆ ವಾಹನ: ರವಿಕುಮಾರ್ ಕೊಲೆ ಪ್ರಕರಣದಲ್ಲಿ ಬಳಸಲಾಗಿದ್ದ ಟೆಂಪೋವನ್ನು ತರಕಾರಿ ಸಾಗಿಸುವುದಕ್ಕಾಗಿ ಬಾಡಿಗೆ ತರಲಾಗಿತ್ತು ಎನ್ನಲಾಗಿದೆ. ನಾಗವಲ್ಲಿ ಮೂಲದ ಟೆಂಪೋ ಮಾಲಕರಿಂದ ಬಾಡಿಗೆ ಪಡೆಯಲಾಗಿದ್ದು, ಕಳೆದ ಎರಡು ಮೂರು ದಿನಗಳಿಂದ ಟೆಂಪೊ ಹನುಮಂತಪುರದಲ್ಲಿ ಓಡಾಡುತ್ತಿತ್ತು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳಿಗೆ ವಾಹನವನ್ನು ಬಾಡಿಗೆ ಕೊಡಿಸಲು ಆಟೋ ಚಾಲಕನೊಬ್ಬ ನೆರವಾಗಿದ್ದು, ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.







