ರಾಜ್ಯ ಸರಕಾರದ ಭಡ್ತಿ ಮೀಸಲು ವಿಳಂಬ ಧೋರಣೆ ಸಲ್ಲ: ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ವೀರಯ್ಯ
ಬೆಂಗಳೂರು, ಅ.1: ರಾಜ್ಯ ಸರಕಾರ ಭಡ್ತಿ ಮೀಸಲು ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದು, ಸಮ್ಮಿಶ್ರ ಸರಕಾರ ದಲಿತರ ಪರವೊ, ವಿರೋಧಿಯೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ ಪ್ರಶ್ನಿಸಿದರು.
ಸೋಮವಾರ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಸುಪ್ರೀಂಕೋರ್ಟ್ ಪರಿಶಿಷ್ಟ ನೌಕರರಿಗೆ ಹುದ್ದೆಯಲ್ಲಿ ಭಡ್ತಿ ಮೀಸಲಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಭಡ್ತಿ ಮೀಸಲು ಜಾರಿಗೊಳಿಸಲು ಕೇಂದ್ರ ಸರಕಾರ ಒಪ್ಪಿಗೆ ಹಾಗೂ ರಾಷ್ಟ್ರಪತಿ ಅಂಕಿತದ ಮೂಲಕ ಅನುಮತಿ ನೀಡಿದ್ದಾರೆ. ಆದೇಶವನ್ನು ರಾಜ್ಯ ಸರಕಾರ ಜಾರಿಗೊಳಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುನಿಯಪ್ಪ ಹಠಾವೋ ಕೋಲಾರ ಬಚಾವೋ: ಸಂಸದ ಕೆ.ಎಚ್.ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 7ಬಾರಿ ಗೆದ್ದು, ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿದ್ದರೂ ಈ ವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಕಾರಣ ಅವರ ವಿರುದ್ಧ ದಲಿತ ಸಂಘಟನೆಗಳು ತಿರುಗಿ ಬಿದ್ದಿದ್ದು ಮುನಿಯಪ್ಪ ಹಠಾವೋ ಕೋಲಾರ ಬಚಾವೋ ಆಂದೋಲನಕ್ಕೆ ಮುಂದಾಗಿವೆ ಎಂದು ಅವರು ಹೇಳಿದರು.
ಭಡ್ತಿ ಮೀಸಲು ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ. ಆದರೂ ಈ ಕುರಿತು ಚರ್ಚಿಸದೆ ರಾಜ್ಯ ಸರಕಾರ ಮೀಸಲಾತಿ ವಿರೋಧಿ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ.
-ಡಿ.ಎಸ್.ವೀರಯ್ಯ ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ







