5 ತಿಂಗಳ ಮಗುವನ್ನು ಅಪಹರಿಸಿ ಕೊಲೆಗೈದ ಪ್ರಕರಣ: ಆರೋಪಿ ಮಹಿಳೆಗೆ ಜೀವಾವಧಿ ಸಜೆ

ಮಂಡ್ಯ, ಅ.1: 5 ತಿಂಗಳ ಮಗುವನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ.
ಮಗುವನ್ನು ಅಪಹರಿಸಿದ ಅಪರಾಧಕ್ಕೆ 5 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ಇದಲ್ಲದೆ ಸಾಕ್ಷ್ಯನಾಶ ಯತ್ನ ಅಪರಾಧಕ್ಕೆ ಕಠಿಣ ಜೀವಾವಾಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಲಾಳಘಟ್ಟ ಗ್ರಾಮದ ರಾಜು ಅವರ ಪತ್ನಿ ಎಲ್.ಎಸ್.ಪ್ರೇಮಕುಮಾರಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ದಂಡದ ಹಣವನ್ನು ಕೊಲೆಯಾದ ಮಗುವಿನ ತಾಯಿಗೆ ನೀಡಲು ತೀರ್ಪು ನೀಡಲಾಗಿದೆ.
2 ಜನವರಿ 2106ರಂದು ಮಂಡ್ಯ ತಾಲೂಕು ದುದ್ದ ಹೋಬಳಿ ಬಿ.ಹಟ್ನ ಗ್ರಾಮದ ಸೌಂದರ್ಯ ಅರುಣ್‍ಕುಮಾರ್ ದಂಪತಿ ತಮ್ಮ 5 ತಿಂಗಳ ಗಂಡು ಮಗು ಶ್ರೀಷಾನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಾಗ, ಮಗು ಆಡಿಸುತ್ತೇನೆಂದು ಪಡೆದುಕೊಂಡ ಪ್ರೇಮಕುಮಾರಿ ಪರಾರಿಯಾಗಿದ್ದಳು. ಅಪಹರಿಸಿದ ಮಗುವಿಗೆ ಹೃದಯ ಕಾಯಿಲೆ ಇದೆ ಎಂದು ಕಂಡುಬಂದ ಮೇಲೆ ಪ್ರೇಮಕುಮಾರಿ, ಜ.7, 2016 ರಂದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ವಾರ್ಡ್‍ನಿಂದ ಮಗುವನ್ನು ಎತ್ತಿಕೊಂಡು ಹೋಗಿ ಕುತ್ತು ಹಿಸುಕಿ ಕೊಲೆಮಾಡಿ ಮತ್ತೆ ವಾರ್ಡ್ ಗೆ ತಂದಿದ್ದಳು.
ವೈದ್ಯರು ಪರೀಕ್ಷಿಸಿದಾಗ ಮಗುವನ್ನು ಕೊಲೆಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕು ಬೆಳ್ಳೂರು ಠಾಣೆ ಪೊಲಿಸರು ಪ್ರೇಮಕುಮಾರಿ ಮತ್ತೊಬ್ಬ ಆರೋಪಿ ಕೃಷ್ಣಮೂರ್ತಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಲಿಗುರ್ ರೆಹಮಾನ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಎ.ಪಿ.ಫಿರೋಜ್‍ಖಾನ್ ವಾದ ಮಂಡಿಸಿದ್ದರು.







