ಮಂಡ್ಯ: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

ಮಂಡ್ಯ, ಅ.1: ಗೃಹಿಣಿಯೊಬ್ಬರ ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಪತಿ ಮನೆಯವರು ವರದಕ್ಷಿಣೆಗಾಗಿ ನೇಣುಬಿಗಿದು ಹತ್ಯೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಗ್ರಾಮದ ಅಶೋಕ ಅವರ ಪತ್ನಿ ಗಾನಶ್ರೀ(28) ಸಾವನ್ನಪ್ಪಿರುವ ಗೃಹಿಣಿಯಾಗಿದ್ದು, ಈ ಸಂಬಂಧ ಆಕೆಯ ತಂದೆ ಎ.ಎಸ್.ಪರಶಿವಮೂರ್ತಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪತಿ ಅಶೋಕ, ಮಾವ ನಂಜೇಗೌಡ, ಅತ್ತೆ ಜಯಮ್ಮ ಮತ್ತು ನಾದಿನಿ ಆಶಾ ಅವರು ವರಕ್ಷಿಣೆಗಾಗಿ ವರದಕ್ಷಿಣೆ ಕಿರುಕುಳ ನೀಡಿ ತನ್ನ ಮಗಳನ್ನು ರವಿವಾರ ನೇಣುಬಿಗಿದು ಕೊಲೆಗೈದಿದ್ದಾರೆ ಎಂದು ಪರಶಿವಮೂರ್ತಿ ದೂರಿನಲ್ಲಿ ಆರೋಪಿಸಿದ್ದಾರೆ.
ಪಾಂಡವಪುರ ತಾಲೂಕು ಅರಳುಕುಪ್ಪೆ ಗ್ರಾಮದ ಪರಶಿವಮೂರ್ತಿ ಅವರ ಪ್ಮತ್ರಿಯಾದ ಗಾನಶ್ರೀ ಅವರನ್ನು ಎಂಟು ವರ್ಷದ ಹಿಂದೆ ಬೂಕನಕೆರೆಯ ಅಶೋಕ ಎಂಬುವರಿಗೆ ಸಾಕಷ್ಟು ವರದಕ್ಷಿಣೆ ನೀಡಿ ಮದುವೆ ಮಾಡಲಾಗಿತ್ತು. ವಿವಾಹವಾದ ಮೂರು ವರ್ಷ ದಂಪತಿ ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ಆದರೆ, ನಂತರ ಅಶೋಕ ಕುಡಿತದ ಚಟಕ್ಕೆ ಒಳಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಜತೆಗೆ ಆತ ಮತ್ತು ಆತನ ಮನೆಯವರು ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಪರಶಿವಮೂರ್ತಿ ಆಪಾದಿಸಿದ್ದಾರೆ.
ಪ್ರಕರಣ ಸಂಬಂಧ ಮೃತಳ ಮಾವ ನಂಜೇಗೌಡ, ಅತ್ತೆ ಜಯಮ್ಮ, ನಾದನಿ ಆಶಾ ಅವರನ್ನು ಪೊಲೀಸರು ಬಂಧಿಸಿದ್ದು, ಪತಿ ಅಶೋಕ ತಲೆಮರೆಸಿಕೊಂಡಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಲ್ ಇನ್ಸ್‍ಪೆಕ್ಟರ್ ವೆಂಕಟೇಶಯ್ಯ, ಸಬ್ ಇನ್ಸ್‍ಪೆಕ್ಟರ್ ಆನಚಿದ್‍ಗೌಡ ತನಿಖೆ ಕೈಗೊಂಡಿದ್ದಾರೆ.
ಮೃತ ಗಾನಶ್ರೀ ಅವರಿಗೆ ಪುತ್ರ ಮೌನಿತ್(8) ಮತ್ತು ಪುತ್ರಿ ಅಹಲ್ಯ(6) ಎಂಬ ಇಬ್ಬರು ಮಕ್ಕಳಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಾಗಾರದ ಎದುರು ಮೃತಳ ಬಂಧುಗಳ ರೋಧನ ಮುಗಿಲು ಮುಟ್ಟಿತ್ತು.







