ಮೈಸೂರು: ದಸರಾ ಗೋಲ್ಡ್ ಕಾರ್ಡ್, ಸಾಂಸ್ಕೃತಿಕ ಉತ್ಸವಗಳ ಪೋಸ್ಟರ್ ಬಿಡುಗಡೆ

ಮೈಸೂರು,ಅ.1: ವಿಶ್ವವಿಖ್ಯಾತ ದಸರಾ ಮಹೋತ್ಸವ 2018 ರ ಹಿನ್ನೆಲೆಯಲ್ಲಿ ದಸರಾ ಗೋಲ್ಡ್ ಕಾರ್ಡ್ ವಿನ್ಯಾಸ ಮತ್ತು ಸಾಂಸ್ಕೃತಿಕ ಉತ್ಸವಗಳ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಪಂ. ಸಭಾಂಗಣದಲ್ಲಿ ಸೋಮವಾರ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ ನಾಳೆಯಿಂದ ದಸರಾ ಗೋಲ್ಡ್ ಕಾರ್ಡ್ ಆನ್‍ಲೈನ್ ಮಾರಾಟ ಆರಂಭವಾಗಲಿವೆ. ಪ್ರವಾಸಿ ತಾಣಗಳು, ದಸರಾ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಪ್ರತಿವರ್ಷದಂತೆ 3,999 ರೂ. ಮೌಲ್ಯದ ಗೋಲ್ಡ್ ಕಾರ್ಡ್ ಮಾರಾಟವಿದ್ದು, ಮೈಸೂರಿನ ಎಂಟು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆ ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶವಿರುತ್ತದೆ ಎಂದು ಹೇಳಿದರು.
ಅರಮನೆ ಆವರಣದಲ್ಲಿ ಡಾ.ಎಸ್.ಬಿ.ಬಾಲ ಸುಬ್ರಹ್ಮಣ್ಯಂ, ಲಾಲ್ ಗುಡಿ ಕೃಷ್ಣನ್, ನರಸಿಂಹಲು ವಡಿವಾಟಿ ಸೇರಿದಂತೆ ಖ್ಯಾತ ಸಂಗೀತಗಾರರ ಕಛೇರಿ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್, ಜಿ.ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಜಿ.ಪಂ.ಸಿಇಓ ಜ್ಯೋತಿ, ಸಾ.ರಾ.ನಂದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.





