ಹಳ್ಳಿಗಳಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಸುವ ‘ಜಲಧಾರೆ’ ಯೋಜನೆಗೆ ಶೀಘ್ರ ಚಾಲನೆ: ಕುಮಾರಸ್ವಾಮಿ

ಬೆಂಗಳೂರು, ಅ.2: ರಾಜ್ಯದ ಎಲ್ಲ ಹಳ್ಳಿಗಳಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡುವ ‘ಜಲಧಾರೆ’ ಯೋಜನೆಗೆ ಶೀಘ್ರವೇ ಚಾಲನೆ ನೀಡುವ ಸಂಬಂಧ ವಿವರವಾದ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಲಧಾರೆ ಯೋಜನೆಗೆ 60-70 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಹಳ್ಳಿಯ ಪ್ರತಿಯೊಂದು ಮನೆಗೆ ನಲ್ಲಿ ಮೂಲಕ, ನದಿ ಮೂಲದಿಂದ ನೀರು ತಲುಪಿಸುವ ಮಹತ್ವಾಕಾಂಕ್ಷಿ ಬೃಹತ್ ಯೋಜನೆ ಇದಾಗಿದೆ. ಶೀಘ್ರವೇ ಈ ಯೋಜನೆಯ ರೂಪುರೇಷೆಗಳನ್ನು ಜನತೆಯ ಮುಂದಿಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ದೇಶಕ್ಕೆ ಪರಿಚಯಿಸಿಕೊಟ್ಟ ಕೀರ್ತಿ ನಮ್ಮ ರಾಜ್ಯಕ್ಕೆ ಸಲ್ಲುತ್ತದೆ. 1984-85ರಲ್ಲಿ ಅಂದಿನ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರದಲ್ಲಿ ಪಂಚಾಯತ್‌ರಾಜ್ ಸಚಿವ ಸಚಿವರಾಗಿದ್ದ ನಝೀರ್ ಸಾಹೇಬರು ಅಧಿಕಾರ ವಿಕೇಂದ್ರೀಕರಣದ ಕೆಲಸ ಆರಂಭಿಸಿದರು. ಅದನ್ನು ಗಮನಿಸಿದ ಅಂದಿನ ಪ್ರಧಾನಿ ರಾಜೀವ್‌ಗಾಂಧಿ, ಸಂವಿಧಾನಕ್ಕೆ ತಿದ್ದುಪಡಿ ತಂದು ಇಡೀ ದೇಶಕ್ಕೆ ಈ ವ್ಯವಸ್ಥೆಯನ್ನು ಪರಿಚಯಿಸಿದರು ಎಂದು ಅವರು ಹೇಳಿದರು.
ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳನ್ನು ಗೌರವಿಸಲು ಹಿಂದಿನ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಎಚ್.ಕೆ.ಪಾಟೀಲ್ 2014ರಿಂದ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮ ಆರಂಭಿಸಿದರು. ನಮ್ಮ ಸರಕಾರವು ಅದನ್ನು ಮುಂದುವರೆಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮಹಾತ್ಮಗಾಂಧೀಜಿಯ 150ನೇ ಜನ್ಮದಿನಾಚರಣೆಯ ವರ್ಷದಲ್ಲಿ ಪ್ರಶಸ್ತಿ ಪಡೆಯುತ್ತಿರುವ ಗ್ರಾಮ ಪಂಚಾಯತ್ ಗಳು ತಮ್ಮ ಮನಸ್ಸಿನಲ್ಲಿ ವಿಶೇಷವಾದ ನೆನಪನ್ನು ಉಳಿಸಿಕೊಳ್ಳಲಿವೆ. ಜಿಲ್ಲಾ ಪಂ., ತಾಲೂಕು ಪಂ.ಗಿಂತ ಹಳ್ಳಿಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂ.ಗಳಿಗೆ ಹೆಚ್ಚಿನ ಅವಕಾಶಗಳಿವೆ ಎಂದು ಅವರು ಹೇಳಿದರು.
ಬೆಂಗಳೂರು ಸುತ್ತಮುತ್ತಲು ಇರುವ ಕೆಲವು ಗ್ರಾಮ ಪಂ.ಗಳಿಗೆ 5 ಕೋಟಿ ರೂ.ಗಳವರೆಗೆ ವರಮಾನವಿದೆ. ರಾಜ್ಯ ಸರಕಾರ ಮಾಡದೆ ಇರುವ ಕೆಲಸಗಳನ್ನು ಗ್ರಾಮ ಪಂ. ಗಳು ತಮ್ಮ ಮಟ್ಟದಲ್ಲಿ ಮಾಡಲು ಅವಕಾಶಗಳಿವೆ. ನೇರವಾಗಿ ಜನರಿಗೆ ಸೌಲಭ್ಯಗಳನ್ನು ಕಲ್ಪಿಸುವ ಅವಕಾಶಗಳು ನಿಮಗೆ ಸಿಕ್ಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಹಳ್ಳಿಗಳು ಉದ್ಧಾರವಾದರೆ ನಿಜವಾದ ಸ್ವಾತಂತ್ರ ಸಿಕ್ಕಿದಂತಾಗುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಹಳ್ಳಿಗಳ ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪಂ. ಅಧ್ಯಕ್ಷರು ಹಾಗೂ ಪಿಡಿಓಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಹಳ್ಳಿಗಳ ಪರಿಸರವನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು.
ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದು, ಒತ್ತುವರಿಯನ್ನು ತೆರವುಗೊಳಿಸುವುದು, ನೀರಿನ ಸಂಗ್ರಹ ಮಟ್ಟವನ್ನು ಹೆಚ್ಚಿಸುಚ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಪಂಚಾಯತಿಯೂ ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿದರೆ ನಾಡಿನ ಅಭಿವೃದ್ಧಿ ಸುಗಮವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮಹಾತ್ಮಗಾಂಧೀಜಿ ಜೊತೆ ಇಂದು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಅವರೊಬ್ಬ ಪ್ರಾಮಾಣಿಕ, ವ್ಯಕ್ತಿಯಾಗಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಮಾದರಿಯಲ್ಲಿ ಗ್ರಾಮ ಪಂ. ಗಳು ಒಂದೊಂದು ಸರಕಾರವಿದ್ದಂತೆ. ಯಾವ ಗ್ರಾಮ ಪಂ. ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ, ಬೇರೆಯವರಿಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಗ್ರಾಮ ಸ್ವರಾಜ್ ಅಧಿನಿಯಮದ ಅಡಿಯಲ್ಲಿ ಗ್ರಾಮ ಪಂ. ಗಳನ್ನು ಸಶಕ್ತಿಕರಣಗೊಳಿಸಲು ಸಾಕಷ್ಟು ಅವಕಾಶಗಳಿವೆ. ನೀವು ಅಸಹಾಯಕರಲ್ಲ, ಇನ್ನೊಬ್ಬರ ಮುಂದೆ ಕೈ ಚಾಚಿ ನಿಲ್ಲುವ ಅಗತ್ಯವಿಲ್ಲ. ಇತರೆ ಗ್ರಾಮ ಪಂ. ಗಳಿಗೆ ನೀವು ಮಾದರಿಯಾಗಿರಬೇಕು ಎಂದು ಅವರು ಕರೆ ನೀಡಿದರು. ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಶೇ.70ರಷ್ಟು ಅನುದಾನ ಬರುತ್ತಿತ್ತು. ಆದರೆ, ದುರಾದೃಷ್ಟವಶಾತ್ ನಾಲ್ಕು ವರ್ಷಗಳಿಂದ ಅನುದಾನ ಬದಲಾವಣೆ ಮಾಡಿರುವುದರಿಂದ ಕೇವಲ ಶೇ.12ರಷ್ಟು ಮಾತ್ರ ಬರುತ್ತಿದೆ. ಉಳಿದ ಶೇ.88ರಷ್ಟು ಹಣವನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಆರ್.ರೋಷನ್ ಬೇಗ್ ವಹಿಸಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಕಾರ್ಯದರ್ಶಿ ಸಾವಿತ್ರಿ, ನಿರ್ದೇಶಕ ಕೆಂಪೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







