ಬಿಜೆಪಿಯಲ್ಲಿಯೇ ರಾಹು, ಕೇತುಗಳು ತಾಂಡವವಾಡುತ್ತಿವೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು, ಅ.2: ಬಿಜೆಪಿ ಪಕ್ಷದಲ್ಲಿಯೇ ರಾಹು, ಕೇತುಗಳು ತಾಂಡವವಾಡುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದರು.
ಮಂಗಳವಾರ ನಗರದ ಶೇಷಾದ್ರಿಪುರಂನ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ನಮ್ಮ ಪಕ್ಷದಲ್ಲಿ ಯಾವ ರಾಹು, ಕೇತುಗಳೂ ಇಲ್ಲ. ಅವುಗಳೇನಾದರೂ ಇದ್ದರೆ, ಅದು ಅವರ ಪಕ್ಷದಲ್ಲಿಯೇ. ಗ್ರಹಗಳ ಸತ್ಯಾಸತ್ಯತೆಯನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂದರು.
ಪದಾಧಿಕಾರಿಗಳ ಬದಲಾವಣೆ: ಪಕ್ಷದ ಪದಾಧಿಕಾರಿಗಳ ಬದಲಾವಣೆಗೆ ಮಾಡುವ ಚಿಂತನೆ ಮೊದಲಿನಿಂದಲೂ ನಡೆದಿದ್ದು, ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಪಕ್ಷದ ಹೈಕಮಾಂಡ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ನಿಷ್ಕ್ರಿಯವಾಗಿರುವ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಎಷ್ಟೇ ಅಡೆತಡೆಗಳು ಎದುರಾದರೂ ಗಾಂಧೀಜಿ, ಶಾಸ್ತ್ರಿಯವರು ಎಂದಿಗೂ ಹೋರಾಟದ ಹಾದಿಯಿಂದ ವಿಮುಖವಾಗಲಿಲ್ಲ. ಹಲವು ಸವಾಲುಗಳನ್ನು ಎದುರಿಸುತ್ತಲೇ ಗುರಿ ಮುಟ್ಟಿದರು. ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾನ್ ಚೇತನಗಳು ಎಂದು ವಿಶ್ವನಾಥ್ ನುಡಿದರು.







