ಬೆಂಗಳೂರು: ಮಾರಾಣಾಂತಿಕ ಹಲ್ಲೆ ಆರೋಪ; ರೌಡಿ ಅಶೋಕ್ ಸೆರೆ

ಬೆಂಗಳೂರು, ಅ.2: ಮದ್ಯದಂಗಡಿಯೊಂದರಲ್ಲಿ ಹಣ ಪಾವತಿ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಆರೋಪದಡಿ ರೌಡಿ ಅಶೋಕ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ನಗರದ ಹಲವು ಬಾರ್‌ಗಳ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ ಆರ್‌ಎಂಸಿ ಯಾರ್ಡ್‌ನ ಲಕ್ಷ್ಮೀ ಶ್ರೀ ಬಾರ್ ಅಂಡ್ ರೆಸ್ಟೊರೆಂಟ್ ಮೇಲೆಯೂ ದಾಳಿ ನಡೆಸಿದ್ದರು.
ಈ ವೇಳೆ ಮದ್ಯದಂಗಡಿಯಲ್ಲಿ ರೌಡಿ ಅಶೋಕ್, ಮದ್ಯ ಖರೀದಿಸಿದ ಹಣ ಪಾವತಿಸುವಂತೆ ಸಮೀಪದಲ್ಲೇ ಕುಳಿತು ಮದ್ಯಪಾನ ಮಾಡುತ್ತಿದ್ದ ಆರ್‌ಎಂಸಿ ಯಾರ್ಡ್ ನಿವಾಸಿ ಸುಧೀರ್ ಎಂಬುವರಿಗೆ ಸೂಚಿಸಿದ್ದಾನೆ. ಆದರೆ, ಸುದೀರ್ ಹಣ ಪಾವತಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ರೌಡಿ ಅಶೋಕ್, ಸುಧೀರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತಲೆ, ಇನ್ನಿತರ ಭಾಗಗಳಿಗೆ ಗಾಯಗಳಾಗಿದ್ದು, ರಕ್ತ ಸೋರುತ್ತಿದ್ದ ಸುಧೀರ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ರೌಡಿ ಅಶೋಕ್‌ನನ್ನು ಬಂಧಿಸಿದ್ದಾರೆ.
ಗಾಯಗೊಂಡಿರುವ ಸುಧೀರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.





