ಇಂಡೋನೇಶ್ಯದಲ್ಲಿ ಸುನಾಮಿ ಕಳ್ಳನಂತೆ ಬಂದು ಅಪ್ಪಳಿಸಿದ್ದೇಕೆ?: ವಿಜ್ಞಾನಿಗಳ ವಿವರಣೆ ಹೀಗಿದೆ

ಪ್ಯಾರಿಸ್, ಅ. 2: ಇಂಡೋನೇಶ್ಯದ ಸುಲವೆಸಿ ದ್ವೀಪಕ್ಕೆ ಮೂರು ದಿನಗಳ ಹಿಂದೆ ಅಪ್ಪಳಿಸಿದ ಸುನಾಮಿ ವಿಜ್ಞಾನಿಗಳಿಗೆ ಅಚ್ಚರಿಯಾಗಿ ಕಾಡಿದೆ. ಯಾಕೆಂದರೆ, ಅದು ಯಾರಿಗೂ ಗೊತ್ತಾಗದಂತೆ ಕಳ್ಳತನದಿಂದ ಬಂದು ಅಪ್ಪಳಿಸಿದ ಸುನಾಮಿಯಾಗಿತ್ತು.
ಸಮುದ್ರದಲ್ಲಿ 7.5ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಬಳಿಕ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿತ್ತು. ಆದರೆ, ಸಮುದ್ರದ ಯಾವುದೇ ಭಾಗದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡುಬರದ ಹಿನ್ನೆಲೆಯಲ್ಲಿ ಮೂರು ಗಂಟೆಗಳ ಬಳಿಕ ಸುನಾಮಿ ಎಚ್ಚರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು.
ಆದರೆ, ಬಳಿಕ ಒಮ್ಮೆಲೇ ಅಪ್ಪಳಿಸಿದ ಸುನಾಮಿ ಪಲು ನಗರದ ಒಂದು ಭಾಗವನ್ನು ಧ್ವಂಸಗೈದಿದೆ.
ಈಗ ವಿಜ್ಞಾನಿಗಳು ಇದಕ್ಕೊಂದು ವಿವರಣೆಯನ್ನು ನೀಡಿದ್ದಾರೆ. ಸುನಾಮಿಯ ಸೃಷ್ಟಿಗೆ ಕಾರಣವಾದ ಭೂಕಂಪಕ್ಕೆ ಹೋಲಿಸಿದರೆ, ಸುನಾಮಿಯು ಕಿರು ಗಾತ್ರದ್ದಾಗಿತ್ತು. ಆದರೆ, ದೀರ್ಘ ಹಾಗೂ ಕಿರಿದಾದ ಕೊಲ್ಲಿ ಸೇರಿದಂತೆ ಇತರ ಅಂಶಗಳು ಜೊತೆಯಾಗಿ ದೈತ್ಯ ಅಲೆಗಳನ್ನು ಸೃಷ್ಟಿಸಿದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪಲು ಸಮುದ್ರದ ವಿಶಿಷ್ಟ ಭೌತಿಕ ಲಕ್ಷಣಗಳು ಮೇಳೈಸಿ ಕಿರುಗಾತ್ರದ ನಿರಪಾಯಕಾರಿ ಸುನಾಮಿಯನ್ನು ಅತ್ಯಂತ ಭೀಕರ ಸುನಾಮಿಯನ್ನಾಗಿ ಪರಿವರ್ತಿಸಿದವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
''ಇಲ್ಲಿನ ಕೊಲ್ಲಿಯ ಗಾತ್ರವು ಖಂಡಿತವಾಗಿಯೂ ಪ್ರಮುಖ ಪಾತ್ರವನ್ನು ವಹಿಸಿದೆ. ಅದು ಅಲೆಗಳ ಗಾತ್ರವನ್ನು ಹಿಗ್ಗಿಸಿದೆ'' ಎಂದು ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿರುವ ಭೂ ವಿಜ್ಞಾನಗಳ ಸಂಸ್ಥೆಯ ಭೂಕಂಪ ಪರಿಣತೆ ಆ್ಯನ್ ಸಾಕೆಟ್ ಹೇಳುತ್ತಾರೆ.







