ಬೆಳೆ ಸಮೀಕ್ಷೆ; ನಿರುದ್ಯೋಗಿ ಯುವ ಜನತೆಗೊಂದು ಸುವರ್ಣಾವಕಾಶ; ರೈತರಿಗೆ ಗರಿಷ್ಠ ಪರಿಹಾರ

ಉಡುಪಿ, ಅ.2: ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಹಣ ಸಂಪಾದನೆಗೆ ಉತ್ತಮ ಅವಕಾಶ. ಮನೆಯಲ್ಲಿ ಸುಮ್ಮನೆ ಕುಳಿತು ಮೊಬೈಲ್‌ನಲ್ಲಿ ಕಾಲಹರಣ ಮಾಡುವ ಬದಲು, ರಾಜ್ಯ ಸರಕಾರದ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಮೊಬೈಲ್ ಬಳಸಿ ತಮ್ಮ ಹಾಗೂ ಸಮೀಪದ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳ ಸಮೀಕ್ಷೆ ಕಾರ್ಯ ನಿರ್ವಹಿಸುವ ಮೂಲಕ ಅಕ್ಟೋಬರ್ ತಿಂಗಳ ಕೊನೆಯೊಳಗೆ ಸರಕಾರದಿಂದ 15,000 ರೂ ಸಂಪಾದಿಸುವ ಅತ್ಯುತ್ತಮ ಅವಕಾಶ.
ರಾಜ್ಯ ಸರಕಾರ, ರಾಜ್ಯದ ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ ಕನಿಷ್ಠ ಸಮಯದಲ್ಲಿ, ಗರಿಷ್ಠ ನೆರವು ನೀಡುವ ಉದ್ದೇಶದಿಂದ ರಾಜ್ಯಾ ದ್ಯಂತ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಯನ್ನು ಕೈಗೊಂಡಿದೆ.
ಅಂಡ್ರಾಯ್ಡಾ ಸೌಲಭ್ಯ ಇರುವ ಮೊಬೈಲ್ ಹೊಂದಿರುವ ನಿರುದ್ಯೋಗಿ ಯುವ ಜನತೆ ಬೆಳೆ ಸಮೀಕ್ಷೆ ಕುರಿತ ಮೊಬೈಲ್ ಆ್ಯಪ್‌ನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ಈ ಸಮೀಕ್ಷೆ ಕಾರ್ಯ ಮಾಡಬಹುದಾಗಿದೆ. ಅತ್ಯಂತ ಸುಲಭವಾಗಿ ಕನ್ನಡದಲ್ಲೇ ಇರುವ ಈ ಆಪ್ ಬಳಸುವ ಕುರಿತಂತೆ ಅಗತ್ಯ ತರಬೇತಿಯನ್ನು ಜಿಲ್ಲಾಳಿತದ ವತಿಯಿಂದ ನೀಡಲಾಗುತ್ತದೆ.
ಈ ಸಮೀಕ್ಷೆ ನಡೆಸುವ ಯುವ ಜನತೆಗೆ ಜಿಲ್ಲಾಡಳಿತದ ವತಿಯಿಂದ ಗುರುತಿನ ಚೀಟಿ, ಅಗತ್ಯ ತರಬೇತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ನೀಡಲಿದ್ದಾರೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 267 ಕಂದಾಯ ಗ್ರಾಮಗಳಲ್ಲಿ ಒಟ್ಟು 9,91,895 ಪ್ಲಾಟ್ಸ್ (ಆರ್‌ಟಿಸಿ) ಇದ್ದು, ಒಬ್ಬರು ಗರಿಷ್ಠ 1500 ಪ್ಲಾಟ್‌ಗಳ ಸಮೀಕ್ಷೆಯನ್ನು ಮಾಡಬಹುದಾಗಿದೆ. ಪ್ರತಿ ಪ್ಲಾಟ್ ಸಮೀಕ್ಷೆಗೆ 10 ರೂ.ನಂತೆ ಗೌರವಧನ ನೀಡಲಾಗುತ್ತಿದೆ. ಒಬ್ಬರು ಒಂದು ದಿನಕ್ಕೆ ಗರಿಷ್ಠ 700-1000 ಪ್ಲಾಟ್‌ಗಳ ಸಮೀ ಕ್ಷೆಯನ್ನು ಮಾಡಬಹುದಾಗಿದೆ.
ಈ ಸಮೀಕ್ಷಾ ಕಾರ್ಯಕ್ಕೆ ಯಾವುದೇ ಸಂದರ್ಶನ ಇರುವುದಿಲ್ಲ, ಆಸಕ್ತ ಯುವ ಜನತೆ ತಮ್ಮ ಗ್ರಾಮದ ಗ್ರಾಮ ಕರಣಿಕರನ್ನು ಅಥವಾ ತಹಶೀಲ್ದಾರರನ್ನು ನೇರವಾಗಿ ಭೇಟಿಯಾಗಿ ಅಗತ್ಯ ತರಬೇತಿ ಪಡೆದು ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಸಮೀಕ್ಷಾ ಕಾರ್ಯಕ್ಕೆ ನೇಮಕವಾಗುವ ಯುವಕರಿಗೆ ತಕ್ಷಣವೇ ನೇಮಕಾತಿ ಆದೇಶ ಹಾಗೂ ಸಂಬಂದಪಟ್ಟ ಗ್ರಾಮದ ಗ್ರಾಮ ಕರಣಿಕರ ಸಹಾಯದೊಂದಿಗೆ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವುದು.
ಮಂಗಳವಾರ ಉಡುಪಿ ಪುತ್ತೂರು ಗ್ರಾಮದ ಸರ್ವೆ ನಂ.102ರಲ್ಲಿ ರೈತ ವಿಠಲ ಶೆಣ್ಯೆ ಅವರ ಜಮೀನಿನಲ್ಲಿ ಬೆಳದ ಭತ್ತದ ಬೆಳೆ ಸಮೀಕ್ಷಾ ಕಾರ್ಯವನ್ನು ಪ್ರಾಯೋಗಿಕವಾಗಿ ತೋರಿಸಿದ ತಹಶೀಲ್ದಾರ್ ಕುರ್ಡೇಕರ್, ಕೇವಲ 5ರಿಂದ 7ನಿಮಿಷದಲ್ಲಿ ಒಂದು ಪ್ಲಾಟ್‌ನ ಸಮೀಕ್ಷೆ ಮಾಡಬಹುದು. ಯುವಜನರು ವಾಟ್ಸಾಪ್, ಪೇಸ್‌ಬುಕ್‌ನ್ನು ಬಳಸುವ ರೀತಿಯಲ್ಲಿ ಅತ್ಯಂತ ಸುಲಭವಾಗಿ ಈ ಸಮೀಕ್ಷೆ ಮಾಡಬಹುದು ಎಂದು ಹೇಳಿದರು.
ಪ್ರಾಕೃತಿಕ ವಿಕೋಪಗಳು ಯಾವುದೇ ಮುನ್ಸೂಚನೆ ನೀಡದೇ ಸಂಭವಿಸು ವುದರಿಂದ ಈ ಸಂದರ್ಭದಲ್ಲಿ ಜಿಲ್ಲೆಯ ರೈತರು ನಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಮಾಡುವ ಉದ್ದೇಶದಿಂದ ಕೈಗೊಂಡಿರುವ ಈ ಸಮೀಕ್ಷಾ ಕಾರ್ಯಕ್ಕೆ, ತಮ್ಮ ಜಮೀನಿಗೆ ಆಗಮಿಸುವ ಸಮೀಕ್ಷೆದಾರರಿಗೆ ಜಿಲ್ಲೆಯ ಎಲ್ಲಾ ರೈತರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಪುತ್ತೂರು ಗ್ರಾಮದಲ್ಲಿ ಮಂಗಳವಾರ ನಡೆದ ಸಮೀಕ್ಷಾ ಕಾರ್ಯದಲ್ಲಿ ಕಂದಾಯ ನಿರೀಕ್ಷಕ ಉಪೇಂದ್ರ, ಗ್ರಾಮ ಕರಣಿಕ ಪುನೀತ್, ಗ್ರಾಮ ಸಹಾಯಕ ವಿಶಾಲ್ ಭಾಗವಹಿಸಿದ್ದರು.







